ನವದೆಹಲಿ, ಮೇ13(Daijiworld News/SS):ಪ್ರಧಾನಿ ನರೇಂದ್ರ ಮೋದಿ ಹೆಂಡತಿಯನ್ನು ತೊರೆದಿರುವುದು ರಾಜಕೀಯ ಲಾಭಕ್ಕಾಗಿ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಬಿಜೆಪಿಯಲ್ಲಿನ ಶಾಸಕಿಯರು ತಮ್ಮ ಗಂಡಂದಿರು ಮೋದಿ ಅವರ ಬಳಿ ಸುಳಿದಾಡುತ್ತಿರುವುದನ್ನು ನೋಡಿ, ಎಲ್ಲಿ ಇವರೂ ಪ್ರಧಾನಿಯ ತರಹ ಹೆಂಡತಿಯರನ್ನು ಬಿಟ್ಟು ಹೋಗುತ್ತಾರೆ ಎನ್ನುವ ಭಯದಲ್ಲಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗ ಮೋದಿ ಸೊಲ್ಲೆತ್ತಿಲ್ಲ. ಈಗ ಅದರೊಂದಿಗೆ ಕೆಟ್ಟ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ. ಇದು ನಾಚಿಕೆಗೇಡಿನ ವಿಷಯ. ರಾಜಕೀಯ ಲಾಭಕ್ಕಾಗಿ ಪತ್ನಿಯನ್ನೇ ಬಿಟ್ಟುಬಂದಿರುವ ಮೋದಿ ಅವರು ಇತರೆ ಮಹಿಳೆಯರನ್ನು ಗೌರವಿಸಲು ಹೇಗೆ ಸಾಧ್ಯ...? ಎಂದು ವಾಗ್ದಾಳಿ ನಡೆಸಿದ್ದಾರೆ.
ದಲಿತರ ಮತಗಳನ್ನು ಪಡೆಯುವುದಕ್ಕಾಗಿ ಮೋದಿ ಅವರ ರ್ಯಾಲಿಗಳಲ್ಲಿ ದಲಿತರ ಬಗ್ಗೆ ಕಪಟ ಪ್ರೀತಿ ತೋರಿಸುತ್ತಿದ್ದಾರೆ. ಶಬ್ಬೀರಪುರ ಗ್ರಾಮದ ದಲಿತರ ಮೇಲೆ ನಡೆದ ದಾಳಿ, ರೋಹಿತ್ ವೇಮುಲ ಸಾವು ಮತ್ತು ಗುಜರಾತ್ನ ಊನಾ ಜಿಲ್ಲೆಯಲ್ಲಿ ಸ್ವಯಂಘೋಷಿತ ಗೋರಕ್ಷಕರು ದಲಿತ ಕುಟುಂಬದ ಮೇಲೆ ನಡೆಸಿದ ಹಲ್ಲೆ... ಇವ್ಯಾವುದನ್ನೂ ದಲಿತರು ಮರೆತಿಲ್ಲ ಎಂದು ಹೇಳಿದರು.