ಕೇರಳ, ಜೂ. 19(DaijiworldNews/AK): ಗಾಲಿಕುರ್ಚಿಯ ಮೇಲೆ ಕುಳಿತು ಯುಪಿಎಸ್ ಸಿ ಪರೀಕ್ಷೆ ಬರೆದ ಯಶಸ್ಸು ಕಂಡ ಶೆರಿನ್ ಅವರ ಪರಿಶ್ರಮದ ಹಾದಿ ನಿಜಕ್ಕೂ ಕುತೂಹಲಕಾರಿಯಾಗಿದೆ. ಇವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಶೆರಿನ್ ಶಹಾನಾ ಕೇರಳದ ವಯನಾಡಿನ ನಿವಾಸಿ. 25 ವರ್ಷದ ಶೆರಿನ್ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಅವರು ಗಾಲಿಕುರ್ಚಿಯ ಸಹಾಯದಿಂದ ಓಡಾಡುತ್ತಾರೆ. ಶೆರಿನ್ ಜೀವನವು ಅಪಘಾತಗಳಿಂದ ತುಂಬಿದೆ. ಒಂದರ ನಂತರ ಒಂದು ದುರಂತಗಳು ಅವರನ್ನು ಹೈರಾಣಾಗಿಸಿದೆ.
ಅವರ ತಂದೆ 2015 ರಲ್ಲಿ ನಿಧನರಾದರು. ಆ ನೋವಿನಿಂದ ಚೇತರಿಸಿಕೊಳ್ಳಿತ್ತಿರುವಾಗಲೇ 2017ರಲ್ಲಿ ಆಕೆ ಛಾವಣಿಯಿಂದ ಬಿದ್ದರು. ಈ ಅಪಘಾತದಲ್ಲಿ ಅವರ ಬೆನ್ನುಮೂಳೆಗೆ ಗಂಭೀರವಾದ ಪೆಟ್ಟು ಬಿದ್ದು, ದೇಹದ ಕೆಳಭಾಗ ಮತ್ತು ಕೈಗಳು ಸ್ವಾಧೀನ ಕಳೆದುಕೊಂಡವು. ಇದಾದ ನಂತರ ಆಕೆ ಸುಮಾರು ಎರಡು ವರ್ಷಗಳ ಕಾಲ ಹಾಸಿಗೆ ಹಿಡಿಯಬೇಕಾಯಿತು. ಈ ಸಮಯದಲ್ಲಿ ಶೆರಿನ್ ಅವರ ತಾಯಿ ಮತ್ತು ಸಹೋದರಿ ಹಾರೈಕೆಗೆ ನಿಂತಿದ್ದರು.
ಶೆರಿನ್ ಗೆ ಬಾಲ್ಯದಿಂದಲೂ ಐಎಎಸ್ ಆಗಬೇಕೆಂಬ ಆಸೆ ಇತ್ತು. ಅಪಘಾತದ ನಂತರ, ಅವರು ಆನ್ ಲೈನ್ ನಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದರು. ರಾಜಕೀಯ ವಿಜ್ಞಾನದಲ್ಲಿ NET-JRF ತೆಗೆದುಕೊಂಡರು. ಬಳಿಕ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡಿದರು.
ಎರಡು ವರ್ಷಗಳ ಹಿಂದೆ ಅವರು ಐಎಎಸ್ ಅಕಾಡೆಮಿಗೆ ಸೇರಿದ್ದರು. ದಿವ್ಯಾಂಗ್ ಅಭ್ಯರ್ಥಿಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡುವ ಅಕಾಡೆಮಿ ಅದಾಗಿತ್ತು. ಇದರೊಂದಿಗೆ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಮುಖ್ಯಸ್ಥ ಮುರಳಿ ತುಮ್ಮರುಕುಡಿಯವರಿಂದಲೂ ಸಾಕಷ್ಟು ಬೆಂಬಲ ಸಿಕ್ಕಿತು.
ಶೆರಿನ್ ಯುಪಿಎಸ್ಸಿ 2022 ರ ಪರೀಕ್ಷೆಯನ್ನು ಗಾಲಿಕುರ್ಚಿಯ ಮೇಲೆ ಕುಳಿತೇ ನೀಡಲು ಮುಂದಾದರು. ಪರೀಕ್ಷೆಯಲ್ಲಿ ಮಲಯಾಳಂ ಆಯ್ಕೆ ಮಾಡಿಕೊಂಡರು. ಪರೀಕ್ಷೆ ಬರೆಯಲು ಲಿಪಿಕಾರರ ಸಹಾಯ ಪಡೆದರು.
ಆದರೆ ಅವರ ಜೀವನದಲ್ಲಿ ಅಪಘಾತಗಳ ಸರಣಿ ನಿಂತಿಲ್ಲ. ಅವರಿಗೆ ಬಲಿಕ ಕಾರು ಅಪಘಾತ ಕೂಡ ಆಯಿತು. ಅದರ ನಂತರ ಶೆರಿನ್ ಮತ್ತೆ ಆಸ್ಪತ್ರೆ ಸೇರಿದರು. UPSC 2022ರ ಫಲಿತಾಂಶ ಬಂದಾಗ, ಶೆರಿನ್ ಶಹಾನಾ ಆಸ್ಪತ್ರೆಯ ಬೆಡ್ ಮೇಲೆ ಇದ್ದರು. ಕಷ್ಟಗಳ ಮಧ್ಯೆಯೇ ಗೆಲುವನ್ನು ಕಂಡ ಅವರ ಬದುಕೇ ಒಂದು ಹೋರಾಟ ಅಂದರೆ ತಪ್ಪಾಗಲಾರದು.