ಬೆಂಗಳೂರು, ಜೂ 20 (DaijiworldNews/ AK): ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿರಲಿಲ್ಲ. ಈಗ ಚನ್ನಪಟ್ಟಣದ ಬಗ್ಗೆ ಮಮತೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟ್ಟಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪರ್ಧಿಸಲಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೆಹಲಿಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೆ ಚನ್ನಪಟ್ಟಣ ಅಭಿವೃದ್ಧಿ ಮಾಡಬೇಡಿ ಎಂದು ಡಿಕೆ ಶಿವಕುಮಾರ್ರನ್ನು ತಡೆದಿದ್ದು ಯಾರು? ಸಂಸದರಾಗಿ ಡಿಕೆ ಶಿವಕುಮಾರ್ ಸಹೋದರನ ಕೊಡುಗೆ ಏನು? ಅವರು ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಎಂದು ಕಾಲ ನಿರ್ಧರಿಸುತ್ತದೆ ಎಂದರು.ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. 2014ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಕಾಯಿಲೆಗಳಿಂದ ಸ್ವಲ್ಪ ಮುಕ್ತಿ ನೀಡುತ್ತದೆ. ಆರೋಗ್ಯವಂತವಾಗಿರಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು. ಕಾಶ್ಮೀರದಲ್ಲಿ ಮೋದಿ ಯೋಗ ಮಾಡುತ್ತಿರುವುದು ಒಳ್ಳೆಯ ಸಂದೇಶ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟದಲ್ಲಿ ಕಾಂಗ್ರೆಸ್ ಕಡಿಮೆ ಸೀಟು ಬರಲು ಇವಿಎಂ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಕರ್ನಾಟಕದ ಲೋಕಸಭಾ ಫಲಿತಾಂಶಕ್ಕೆ ಇವಿಎಂ ಕಾರಣವಾದರೆ, 2023 ರ ವಿಧಾನಸಭೆ ವಿಧಾನ ಸಭೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗೆದ್ದಿತ್ತಲ್ಲ, ಆಗ ಇವಿಎಂ ದೋಷವಿತ್ತಾ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಅವರು ಟಾಂಗ್ ನೀಡಿದರು.