ಮುಂಬೈ, ಜೂ.22(DaijiworldNews/AA): ಉದ್ಯಮಿ ಮುಖೇಶ್ ಅಂಬಾನಿಯವರ ಡೀಪ್ ಫೇಕ್ ವಿಡಿಯೋ ಬಳಸಿಕೊಂಡು ಮುಂಬೈ ಮೂಲದ ವೈದ್ಯರೊಬ್ಬರಿಗೆ 7 ಲಕ್ಷ ರೂ. ವಂಚಿಸಿರುವ ಘಟನೆ ಮುಂಬೈಯ ಅಂಧೇರಿಯಲ್ಲಿ ನಡೆದಿದೆ.
ಆಯುರ್ವೇದ ವೈದ್ಯೆ ಕೆ.ಹೆಚ್ ಪಾಟೀಲ್(54) ಅವರು ವಂಚನೆಗೊಳಗಾದವರು. ಈ ಬಗ್ಗೆ ಕೆ.ಹೆಚ್ ಪಾಟೀಲ್ ಅವರು ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನಲ್ಲಿ ಏಪ್ರಿಲ್ 15 ರಂದು ಇನ್ಸ್ಟಾಗ್ರಾಂ ಫೀಡ್ ಮೂಲಕ ಮುಖೇಶ್ ಅಂಬಾನಿಯವರ ಡೀಪ್ ಫೇಕ್ ವಿಡಿಯೋ ನೋಡಿದ್ದೇನೆ. ರಾಜೀವ್ ಶರ್ಮಾ ಟ್ರೇಡ್ ಗ್ರೂಪ್ ಎಂಬ ಹೆಸರಿನ ಟ್ರೇಡಿಂಗ್ ಅಕಾಡೆಮಿಯ ಯಶಸ್ಸನ್ನು ಅಂಬಾನಿ ಅವರು ಪ್ರಚಾರ ಮಾಡುತ್ತಿದ್ದರು. ಹಾಗೂ ಹೂಡಿಕೆಯ ಮೇಲೆ ಹೆಚ್ಚಿನ ಲಾಭಕ್ಕಾಗಿ ಬಿಸಿಎಫ್ ಅಕಾಡೆಮಿಗೆ ಸೇರುವಂತೆ ಜನರನ್ನು ಪ್ರೇರೇಪಿಸುತ್ತಿರುವುದನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ವೈದ್ಯೆ ಕೆ.ಹೆಚ್ ಪಾಟೀಲ್ ಅವರು ಈ ವಿಡಿಯೋವನ್ನು ಸತ್ಯವೆಂದು ನಂಬಿ ಅಕಾಡೆಮಿಯನ್ನು ಆನ್ಲೈನ್ನಲ್ಲಿ ಸಂಪರ್ಕಿಸಿ ಮೇ ಮತ್ತು ಜೂನ್ ನಡುವೆ ಒಟ್ಟು 7.1 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅದು ತ್ವರಿತವಾಗಿ 30 ಲಕ್ಷ ರೂಪಾಯಿಗಳ ಲಾಭವನ್ನು ತೋರಿಸಿತು. ಅದನ್ನು ವಿಥ್ ಡ್ರಾ ಮಾಡಿಕೊಳ್ಳುವಾಗ ಪದೇ ಪದೇ ಫೈಲ್ಡ್ ಎಂದು ಬರುತ್ತಿತ್ತು. ಹೀಗಾಗಿ ಅವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ವೇಳೆ ಇದೊಂದು ಡೀಪ್ ಫೇಕ್ ವಿಡಿಯೋ ಎಂಬುದು ಬಹಿರಂಗವಾಗಿದೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.