ಬೆಂಗಳೂರು, ಜೂ.22(DaijiworldNews/AK): ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯದ ಜನರ ಆಶೀರ್ವಾದ ಲಭಿಸಿದೆ. ರಾಜ್ಯದಲ್ಲಿ 19 ಜನ ಎನ್ಡಿಎ ಸಂಸದರ ಆಯ್ಕೆಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ 19 ಜನ ಎನ್ಡಿಎ ಸಂಸದರ ಸನ್ಮಾನ, ರಾಜ್ಯದ ಕೇಂದ್ರ ಸಚಿವರ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಸಾಕಷ್ಟು ಅಪಪ್ರಚಾರದ ನಡುವೆ, ಆಮಿಷಗಳ ನಡುವೆ ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದ ನೂತನ ಸಂಸದರಿಗೆ ಅಭಿನಂದನೆಗಳು ಎಂದು ಹೇಳಿದರು.
ಹಿಂದೆ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷ ಈಗ 9 ಸ್ಥಾನ ಗೆದ್ದಿರಬಹುದು. ಆದರೆ, ಮತ್ತೊಂದು ಕಡೆ ರಾಜ್ಯದಲ್ಲಿ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ ಸಚಿವರಿರುವ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಲೀಡ್ ಪಡೆದಿದ್ದಾರೆ ಎಂದು ವಿವರಿಸಿದರು.
ಮುಂದಿನ 4 ವರ್ಷ ರಾಜ್ಯದ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿತ್ತು. ಆದರೆ, ಕಳೆದ ಒಂದು ವರ್ಷದ ಕಾಂಗ್ರೆಸ್ ದುರಾಡಳಿತದಲ್ಲಿ ರಾಜ್ಯವು ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಸಾಧಿಸುವಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ವೈಫಲ್ಯವನ್ನು ಮುಚ್ಚಿಡಲು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಇದು ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆ. ಇದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ಎಲ್ಲರೂ ಶ್ರಮ ಹಾಕೋಣ. ವಿಧಾನಸಭಾ ಅಧಿವೇಶನದಲ್ಲೂ ನಾವು ಒಟ್ಟಾಗಿ, ಒಂದಾಗಿ ಕಾಂಗ್ರೆಸ್ ಸೊಕ್ಕನ್ನು ಮುರಿಯುತ್ತೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಎಂದರೆ ಸುಳ್ಳು ಗ್ಯಾರಂಟಿ, ಭ್ರಷ್ಟಾಚಾರ, ದುರಾಡಳಿತ ಮತ್ತು ಅಭಿವೃದ್ಧಿ ಶೂನ್ಯತೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಮನವಿ ಮಾಡಿದರು.
ಸದ್ಯವೇ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ನಾವು ಜೆಡಿಎಸ್ ಪಕ್ಷದ ಜೊತೆಗೂಡಿ ಇವುಗಳಲ್ಲಿ ಗೆಲುವು ಸಾಧಿಸಿ ನಮ್ಮ ಶಕ್ತಿಯನ್ನು ತೋರಿಸಬೇಕು ಎಂದು ತಿಳಿಸಿದರು.