ಬೆಂಗಳೂರು, ಜೂ.22(DaijiworldNews/AA): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗಿದೆ. ಈ ಹಿನ್ನಲೆ ಇಂದು ಆರೋಪಿಗಳನ್ನು ಮತ್ತೆ 24 ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ನಾಲ್ವರು ಆರೋಪಿಗಳಿಗೆ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳಾದ ದರ್ಶನ್, ವಿನಯ್, ಧನರಾಜ್ ಹಾಗೂ ಪ್ರದೋಶ್ ನನ್ನು ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಆರೋಪಿಗಳನ್ನು ಈಗಾಗಲೇ 3 ಬಾರಿ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಟ ದರ್ಶನ್ ಮನೆಯಲ್ಲಿ ಸಿಕ್ಕ 40 ಲಕ್ಷ ರೂಪಾಯಿ ಹಣದ ಬಗ್ಗೆ ವಿಚಾರಿಸಲು ಎರಡು ದಿನದ ಹಿಂದೆ ಪೊಲೀಸರು, ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಅನೇಕ ಪ್ರಶ್ನೆಗಳನ್ನು ಕೇಳಿ ಪೊಲೀಸರು ಮಾಹಿತಿ ಪಡೆದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ವರೆಗೆ 17 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 13 ಆರೋಪಿಗಳನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.