ಬೆಂಗಳೂರು, ಜೂ.24(DaijiworldNews/AK): ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಬಂಧನಕ್ಕೆ ಒಳಗಾದ ರೇವಣ್ಣ ಅವರ ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಕೋರ್ಟ್ 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಸಿಐಡಿಗೆ ವಹಿಸಿ ಭಾನುವಾರ ಆದೇಶಿಸಿತ್ತು. ಆದರೆ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಆಗಿರಲಿಲ್ಲ. ಭಾನುವಾರ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇಂದು ಸೂರಜ್ ರೇವಣ್ಣ ಅವರನ್ನು ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದರು. ವಿಚಾರಣೆ ವೇಳೆ ಸರ್ಕಾರಿ ವಕೀಲರು 14 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಧೀಶರು 8 ದಿನ ಪೊಲೀಸ್ ಕಸ್ಟಡಿಗೆ ನೀಡಿದರು. ಜುಲೈ 1 ಸಂಜೆ 4 ಗಂಟೆಗೆ ಸೂರಜ್ ರೇವಣ್ಣ ಅವರನ್ನು ಕೋರ್ಟ್ಗೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸಿಐಡಿ ಪೊಲೀಸರಿಗೆ ಸೂಚಿಸಿದ್ದಾರೆ.
ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಭಾನುವಾರ ಬೆಳಗ್ಗೆ ಸೂರಜ್ರನ್ನು ಅಧಿಕೃತವಾಗಿ ಬಂಧಿಸಿದರು.