ದೆಹಲಿ, ಜೂ.24(DaijiworldNews/AA): ರಾಜ್ಯಸಭೆಯ ಸಭಾನಾಯಕರನ್ನಾಗಿ ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಜೆಪಿ ನಡ್ಡಾ ಅವರನ್ನು ಇಂದು ನೇಮಿಸಲಾಗಿದೆ.
ಜೆಪಿ ನಡ್ಡಾ ಅವರು ಕ್ಯಾಬಿನೆಟ್ನಲ್ಲಿ ಕೆಮಿಕಲ್ ಮತ್ತು ರಸಗೊಬ್ಬರಗಳ ಖಾತೆಯನ್ನು ಕೂಡ ಹೊಂದಿದ್ದಾರೆ. ಪ್ರಧಾನಿ ಮೋದಿಯವರ 2ನೇ ಬಾರಿ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವರು ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಸಭಾನಾಯಕರಾಗಿದ್ದರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ನಡ್ಡಾ ಅವರು ತಮ್ಮ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳಲಾಗುತ್ತಿತ್ತು. 2020ರಲ್ಲಿ ಗೃಹ ಸಚಿವ ಅಮಿತ್ ಶಾ ಅವರ ನಂತರ ನಡ್ಡಾ ಬಿಜೆಪಿ ಅಧ್ಯಕ್ಷರಾಗಿದ್ದರು. ಆದರೀಗ ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕರನ್ನಾಗಿ ನೇಮಿಸಲಾಗಿದೆ.
ಎಲ್ಲಾ ರಾಜ್ಯಗಳಲ್ಲಿ 50 ಪ್ರತಿಶತದಷ್ಟು ಸಾಂಸ್ಥಿಕ ಚುನಾವಣೆಗಳು ಪೂರ್ಣಗೊಂಡ ನಂತರವೇ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪಕ್ಷದ ಕಾನೂನುಗಳು ಹೇಳುತ್ತವೆ. ಇದು ಸುಮಾರು ಆರು ತಿಂಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಹೊಸ ಅಧ್ಯಕ್ಷರನ್ನು ಡಿಸೆಂಬರ್-ಜನವರಿಯಲ್ಲಿ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.