ವಿಜಯಪುರ, ಜೂ.24(DaijiworldNews/AA): ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ಅಪಾರ ಪ್ರಮಾಣದ ಹಣ ಬಿಜೆಪಿ ಮೂಲದಿಂದಲೇ ಹೋಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷದಿಂದಲೇ ಹಣ ಹೋಗಿರುವುದಕ್ಕೆ ಸತ್ಯ ಶೋಧನಾ ಸಮಿತಿ ಆಗಬೇಕು ಎಂದು ಒತ್ತಾಯಿಸಿದರು. ಲೋಕಸಭಾ ಚುನಾವಣೆಯಲ್ಲಿ ಪರಾಜೆ ಹೊಂದಿದ ಅಭ್ಯರ್ಥಿಗಳು ಹಾಗೂ ಗೆದ್ದ ಅಭ್ಯರ್ಥಿಗಳ ದೂರುಗಳು ಸಹ ಇವೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡ ವಿ. ಸೋಮಣ್ಣ ಅವರ ದೂರು ಇದೆ ಎಂದರು.
ಕಲಬುರಗಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ ಯಾದವ್ ಅವರದ್ದು ಇದೆ ಆರೋಪವಾಗಿದೆ. ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಗವಂತ ಖೂಬಾ ಅವರದ್ದು ಇದೇ ರೀತಿಯಾಗಿದೆ. ಚಿಕ್ಕೋಡಿ ಕ್ಷೇತ್ರದ ಜೊಲ್ಲೆ ಅವರದ್ದು ಹೀಗೆ ಆಗಿದೆ ಎಂದು ಹೇಳಿದರು.
ದೊಡ್ಡ ದೊಡ್ಡ ಜವಾಬ್ದಾರಿ ಇರುವವರು ಈ ರೀತಿ ಮಾಡುವುದರಿಂದ ಪಕ್ಷಕ್ಕೆ ಒಳ್ಳೆಯದಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 250 ರಿಂದ 400 ಸ್ಥಾನಗಳು ಬರುತ್ತವೆ ಎಂದು ನಿರೀಕ್ಷೆ ಇಟ್ಟಿದ್ದೆವು. ಬಹಳ ಕಡೆ ಗದ್ದಲವಾಗಿದೆ. ಲೋಕಸಭಾ ಸದಸ್ಯರು ಕೂಡ ಜನಪ್ರಿಯತೆ ಕಳೆದುಕೊಂಡಿದ್ದರು. ಜೊತೆಗೆ ಅವರು ಜನರೊಂದಿಗೆ ಸಂಪರ್ಕ ಹೊಂದಿರಲಿಲ್ಲ ಮತ್ತು ಕೆಲಸ ಮಾಡಿರಲಿಲ್ಲ. ಕಾರ್ಯಕರ್ತರೊಂದಿಗೆ ಶಾಸಕರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಸೋಲಿಗೆ ಇವು ಕೂಡ ಕಾರಣವಾಗಿದೆ ಎಂದು ತಿಳಿಸಿದರು.