ನವದೆಹಲಿ, ಜೂ.25(DaijiworldNews/AK):ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಸಚಿವೆ ಅತಿಶಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಮಂಗಳವಾರ ಬೆಳಗಿನ ಜಾವ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ ಅತಿಶಿ ಅವರನ್ನು ರಾಷ್ಟ್ರ ರಾಜಧಾನಿಯ ಲೋಕನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಶಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಹರಿಯಾಣ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು. ಆದರೂ ವೈದ್ಯರ ಸಲಹೆ ತಿರಸ್ಕರಿಸಿದ ಸಚಿವೆ ಅತಿಶಿ ಆರೋಗ್ಯ ಹದಗೆಟ್ಟಿದ್ದರೂ, ಹರಿಯಾಣವು ದೆಹಲಿಯ ನ್ಯಾಯಯುತವಾದ ನೀರನ್ನು ಬಿಡುಗಡೆ ಮಾಡುವವರೆಗೆ ಅನಿರ್ದಿಷ್ಟ ಉಪವಾಸ ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ರಾಷ್ಟ್ರ ರಾಜಧಾನಿಗೆ ಸಮರ್ಪಕ ನೀರಿನ ಪೂರೈಸುವಂತೆ ಆಗ್ರಹಿಸಿ ಇದೇ ತಿಂಗಳ ಜೂನ್ 22ರಂದು ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ದೆಹಲಿಗೆ ಒಟ್ಟು 1005 ಎಂಜಿಡಿ ನೀರಿನ ಅಗತ್ಯವಿದೆ, ಅದರಲ್ಲಿ 613 ಎಂಜಿಡಿ ಹರಿಯಾಣದ ಮೂಲವಾಗಿದೆ. ಕಳೆದ ಕೆಲ ವಾರಗಳಲ್ಲಿ ಈ ಮಟ್ಟದ ನೀರಿನ ಪೂರೈಕೆಯು ಗಣನೀಯವಾಗಿ ಕಡಿಮೆಯಾಗಿದೆ. ಕೇವಲ 513 ಎಂಜಿಡಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು ಎಂಜಿಡಿ ನೀರು 28,500 ಜನರ ಬಳಕೆಗೆ ಬರಲಿದೆ. ಹರಿಯಾಣ 100 MGD ಕಡಿಮೆ ನೀರನ್ನು ನೀಡಿದರೆ 28 ಲಕ್ಷಕ್ಕೂ ಹೆಚ್ಚು ಜನರಿಗೆ ದಿನದ ನೀರಿನ ಕೊರತೆಯಾಗಲಿದೆ ಹಾಗಾಗಿ ಸಮರ್ಪಕವಾಗಿ ನೀರು ಪೂರೈಕೆ ಆಗಬೇಕು ಎಂಬುದು ಅವರ ಆಗ್ರಹವಾಗಿದೆ.