ಬೆಂಗಳೂರು, ಜೂ.25(DaijiworldNews/AA): ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ನಡೆಸಿ ಮಾತನಾಡಿದ ಅವರು, ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆ. ಅಲ್ಲಿಗಿಂತ ಹಾಲಿನ ದರ ಕಡಿಮೆ ಇದ್ದರೆ ಜಾಸ್ತಿ ಮಾಡ್ತಾರೆ. ನನಗೆ ಗೊತ್ತಿರುವ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಇಲ್ಲಿ ಕಡಿಮೆ ಇದೆ ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ತೈಲ ಬೆಲೆ ಏರಿಕೆಯ ಶಾಕ್ ನಿಂದ ಜನರು ಸುಧಾರಿಸಿಕೊಳ್ಳುವ ಮೊದಲೇ ಕೆಎಂಎಫ್ ಹಾಲಿನ ದರ ಏರಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ. ಹಾಲಿನ ಪ್ರಮಾಣವನ್ನು ಹೆಚ್ಚಿಸುವದರ ಜೊತೆಗೆ 2 ರೂ. ಹೆಚ್ಚಳ ಮಾಡಲಾಗಿದೆ. ಒಂದು ಲೀಟರ್ ಬದಲಿಗೆ 1,050 ಎಂಎಲ್ನ ಪ್ಯಾಕೆಟ್ ಹಾಲು ದೊರೆಯಲಿದೆ. ಈ ಮೂಲಕ ಪ್ಯಾಕೆಟ್ನಲ್ಲಿ ಸಿಗುವ 50 ಎಂಎಲ್ ಹೆಚ್ಚಿಗೆ ಹಾಲಿಗೆ 2 ರೂ. ಏರಿಸಲಾಗಿದೆ.
ಪ್ರಸ್ತುತ ಕೆಎಂಎಫ್ನ 1 ಲೀಟರ್ ಹಾಲಿಗೆ ಪ್ರಸ್ತುತ ದರ 42 ರೂ. ಆಗಿದೆ. ಆದರೆ, 1 ಲೀಟಲ್ ಹಾಲಿಗೆ ಹೆಚ್ಚುವರಿಯಾಗಿ 50 ಎಂಎಲ್ ಸೇರ್ಪಡೆಗೊಂಡು 44 ರೂ. 10 ಪೈಸೆ ಆಗಿರಲಿದೆ. ಹೆಚ್ಚುವರಿ 2 ರೂಪಾಯಿ ದರ ನಾಳೆಯಿಂದ ಜಾರಿಗೆ ಬರಲಿದೆ.