ಹಾಸನ, ಜೂ.25(DaijiworldNews/AA): ಅಸಹಜ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಸೂರಜ್ ರೇವಣ್ಣ ಪರವಾಗಿ ದೂರು ದಾಖಲಿಸಿದ್ದ ಸೂರಜ್ ಆಪ್ತ ಶಿವಕುಮಾರ್ ಇದೀಗ ತಿರುಗಿ ಬಿದ್ದಿದ್ದಾರೆ.
ಸಂತ್ರಸ್ತರ ವಿರೋಧ ಕಟ್ಟಿಕೊಂಡಿದ್ದ ಶಿವಕುಮಾರ್ ಏಕಾಏಕಿ ತಮ್ಮ ನಿಲುವು ಬದಲಾಯಿಸಿದ್ದು, ಇದೀಗ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಶಿವಕುಮಾರ್ ಸಂತ್ರಸ್ತರ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಸಂತ್ರಸ್ತರು ಶಿವಕುಮಾರ್ ವಿರುದ್ಧವೇ ದೂರು ನೀಡಿದ್ದರು. ಆ ಬಳಿಕ ಶಿವಕುಮಾರ್ ನಾಪತ್ತೆಯಾಗಿದ್ದರು. ಇದೀಗ ಏಕಾಏಕಿ ಪ್ರತ್ಯಕ್ಷವಾದ ಅವರು ಸೂರಜ್ ವಿರುದ್ಧ ದೂರು ದಾಖಲಿಸಿದ್ದಾರೆ.
ಜೊತೆಗೆ ಶಿವಕುಮಾರ್ ವಿರುದ್ಧವೇ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಶಿವಕುಮಾರ್ ಶ್ರೀರಾಮ್ ಫೈನಾನ್ಸ್ ರಾಮನಾಥಪುರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರು ಗ್ರಾಹಕರು ವಾಹನ ಸಾಲದ ವಂತಿಕೆ ಕಟ್ಟಲು ನೀಡಿದ್ದ 2,91,916 ರೂಪಾಯಿ ಹಣವನ್ನ ದುರ್ಬಳಕೆ ಮಾಡಿದ್ದ ಆರೋಪದಡಿ ಪ್ರಕರಣ ದಾಖಲಾಗಿದೆ.