ನವದೆಹಲಿ, ಜೂ.25(DaijiworldNews/AA): ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಗೆ ಬುಧವಾರ ಮತದಾನ ನಡೆಯಲಿದೆ. ಈ ಹಿನ್ನೆಲೆ ತಪ್ಪದೆ ಪಾಲ್ಗೊಳ್ಳುವಂತೆ ಪಕ್ಷದ ಎಲ್ಲಾ ಸಂಸದರಿಗೆ ಕಾಂಗ್ರೆಸ್ ವಿಪ್ ಜಾರಿಗೊಳಿಸಿದೆ.
18ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಇಂದು ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಆಯ್ಕೆಗೆ ಚುನಾವಣೆಯು ಇದೇ 26ರಂದು ನಡೆಯಲಿದೆ. 27ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ತನ್ನ ಅಭ್ಯರ್ಥಿಯಾಗಿ ಬಿಜೆಪಿಯ ಓಂ ಬಿರ್ಲಾ ಅವರನ್ನು ಕಣಕ್ಕಿಳಿಸಿದ್ದರೆ, ಇಂಡಿಯಾ ಮೈತ್ರಿಕೂಟವು ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಕಣಕ್ಕೆ ಇಳಿಸಿದೆ.