ನವದೆಹಲಿ, ಜೂ.25(DaijiworldNews/AA): ಮೋದಿ ಕೇಂದ್ರದಲ್ಲಿ ಕಳೆದ 10 ವರ್ಷಗಳ ಅಧಿಕಾರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಗತಕಾಲವನ್ನು ಮೆಲುಕು ಹಾಕುತ್ತಿದ್ದಾರೆ ಎಂದು ತುರ್ತು ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನರೇಂದ್ರ ಮೋದಿಯವರೇ, ನಮ್ಮ ದೇಶವು ಭವಿಷ್ಯವನ್ನು ಎದುರು ನೋಡುತ್ತಿದೆ. ಆದರೆ, ನಿಮ್ಮ ವೈಫಲ್ಯಗಳನ್ನು ಮರೆಮಾಡಲು ನೀವು ಹಿಂದಿನದನ್ನು ಮತ್ತೆ ಕೆದಕುತ್ತಿದ್ದೀರಿ. ಕಳೆದ 10 ವರ್ಷಗಳಲ್ಲಿ ನೀವು 140 ಕೋಟಿ ಭಾರತೀಯರಿಗೆ 'ಅಘೋಷಿತ ತುರ್ತುಸ್ಥಿತಿ' ಏನೆಂದು ಅನುಭವ ಉಂಟಾಗುವಂತೆ ಮಾಡಿದ್ದೀರಿ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಭಾರೀ ಆಘಾತವನ್ನು ಉಂಟುಮಾಡಿದೆ ಎಂದು ಟೀಕಿಸಿದ್ದಾರೆ.
ಇನ್ನು ಪಕ್ಷಗಳನ್ನು ಒಡೆಯುವುದು, ಚುನಾಯಿತ ಸರ್ಕಾರಗಳನ್ನು ಹಿಂಬಾಗಿಲಿನ ಮೂಲಕ ಉರುಳಿಸುವುದು, ಇಡಿ, ಸಿಬಿಐ, ಐಟಿಯಂತಹ ಸಂಸ್ಥೆಗಳ ದುರುಪಯೋಗ, ಪ್ರತಿಪಕ್ಷಗಳ ನಾಯಕರ ವಿರುದ್ಧ ಕುತಂತ್ರ, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕುವುದು, ಚುನಾವಣೆಗೆ ಮುನ್ನ ಅಧಿಕೃತ ಯಂತ್ರೋಪಕರಣಗಳನ್ನು ಬಳಸುವುದು ಇವೆಲ್ಲವೂ ಅಘೋಷಿತ ತುರ್ತು ಪರಿಸ್ಥಿತಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.