ಬೆಂಗಳೂರು, ಜೂ.28(DaijiworldNews/AA): ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಬಿ.ಎಸ್.ವೈ ಅವರು ಪ್ರಕರಣದ ಮೊದಲ ಆರೋಪಿ, ಅವರ ಸಹಚರ ವೈ.ಎಂ. ಅರುಣ್ 2ನೇ ಆರೋಪಿ, ಎಂ.ರುದ್ರೇಶ್ 3ನೇ ಆರೋಪಿ ಹಾಗೂ ಜಿ.ಮರಿಸ್ವಾಮಿ 4ನೇ ಆರೋಪಿಯಾಗಿದ್ದಾರೆ. ಇದೀಗ ಈ ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಅಧಿಕಾರಿಗಳು ಸಲ್ಲಿಸಿರುವ ಈ 750 ಪುಟಗಳ ಚಾರ್ಜ್ಶೀಟ್ನಲ್ಲಿ ಬಿಎಸ್ವೈ ಅವರು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದು, ಅದಕ್ಕೆ ಪೂರಕವಾದ ಕೆಲ ವಿಡಿಯೋಗಳನ್ನು ತಮ್ಮ ಸಹಚರರ ಮೂಲಕ ಡಿಲೀಟ್ ಮಾಡಿಸಿರುತ್ತಾರೆ. ಇದರೊಂದಿಗೆ ಈ ಪ್ರಕರಣವನ್ನು ಮುಚ್ಚಿ ಹಾಕಲು 2 ಲಕ್ಷ ರೂ. ಕೊಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ಈ ಚಾರ್ಜ್ಶೀಟ್ನಲ್ಲಿ ಮಹಿಳೆಯೋರ್ವರು ತಮ್ಮ ಪುತ್ರಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಂತೆ ಸಹಾಯ ಕೋರಿ ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದಾರೆ. ಆಗ ಯಡಿಯೂರಪ್ಪ, ಅಪ್ರಾಪೆನಿಯನ್ನು ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡು, ನಿನ್ನ ಮೇಲೆ ಕೃತ್ಯ ಎಸಗಿದ ಆರೋಪಿಯ ಮುಖ ನೆನಪಿದೆಯೇ ಎಂದು ಕೇಳುತ್ತಾ, ಅಪ್ರಾಪೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಳಿಕ ಬಾಲಕಿ ಗಾಬರಿಯಾಗಿದ್ದು, ಬಾಗಿಲು ತೆರೆಯುವಂತೆ ಹೇಳಿದಾಗ, ತಮ್ಮ ಜೇಬಿನಲ್ಲಿದ್ದ ಹಣವನ್ನು ಅಪ್ರಾಪ್ತೆಗೆ ನೀಡಿದ್ದಾರೆ. ಆ ನಂತರ ಕೋಣೆಯಿಂದ ಹೊರಗಡೆ ಬಂದು, ಬಾಲಕಿಯ ತಾಯಿಗೆ "ಈ ಕೇಸ್ನಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ' ಎಂದು ಹೇಳಿ, ಆಕೆಗೂ ಒಂದಷ್ಟು ಹಣ ಕೊಟ್ಟು ಕಳುಹಿಸಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.
ಜೊತೆಗೆ ಪ್ರಕರಣದಲ್ಲಿ ಅಪ್ರಾಪ್ತೆಯ ತಾಯಿ ಮಾಡಿಕೊಂಡಿದ್ದ ವಿಡಿಯೋವನ್ನು ಆಕೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದರು. ಅದನ್ನು ಗಮನಿಸಿದ ಬಿಎಸ್ವೈ, ತಮ್ಮ ಸಹಚರರಾದ ಅರುಣ್, ರುದ್ರೇಶ್, ಮರಿಸ್ವಾಮಿ ಮೂಲಕ ವಿಡಿಯೋ ಡಿಲೀಟ್ ಮಾಡಿಸಿ, ಆಕೆಗೆ 2 ಲಕ್ಷ ರೂ. ಕೊಟ್ಟು ಕಳುಹಿಸಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖೀಸಲಾಗಿದೆ.