ಹುಬ್ಬಳ್ಳಿ, ಜೂ.29(DaijiworldNews/AA): ಬಿಜೆಪಿಯವರಿಗೆ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ವಿಷಯದಲ್ಲಿ ಮಾತಾಡುವ ಹಕ್ಕಿಲ್ಲ. ಯಾಕೆಂದರೆ ಅವರ ಅಧಿಕಾರಾವಧಿಯಲ್ಲಿ ಎಷ್ಟು ಡಿಸಿಎಂಗಳಿದ್ದರು ಅನ್ನೋದು ನಮಗೆ ಗೊತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಮಂತ್ರಿಗಳು ಇನ್ನೂ ಡಿಸಿಎಂಗಳು ಬೇಕು ಎಂದು ಕೇಳುವ ಹಕ್ಕು ಹೊಂದಿದ್ದಾರೆ. ಆದರೆ ಬೇಡಿಕೆ ಮನ್ನಿಸುವುದು ಬಿಡೋದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಮುಖ್ಯಮಂತ್ರಿ ಆಯ್ಕೆ ಶಾಸಕರ ಅಭಿಪ್ರಾಯದ ಆಧಾರದ ಮೇಲೆ ನಡೆಯುತ್ತದೆ. ಈ ಕುರಿತು ನಡೆದಿರುವ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ಕುರಿತು ಹೈಕಮಾಂಡ್ ತೀರ್ಮಾನಿಸುತ್ತದೆ. ಸ್ವಾಮೀಜಿಗಳು ಯಾಕೆ ಸಿಎಂ ಬದಲಾವಣೆ ಬಗ್ಗೆ ಮಾತಾಡುತ್ತಿದ್ದಾರೋ ಗೊತ್ತಿಲ್ಲ, ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಆದರೆ ಖುದ್ದು ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿರುವ ಹಾಗೆ ಅವರು ಪ್ರಜಾತಂತ್ರ ವ್ಯವಸ್ಥೆಯ ಆಧಾರದಲ್ಲಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಹೈಕಮಾಂಡ್ ನಿಂದ ನಿಯುಕ್ತರಾಗಿರುವ ಮುಖ್ಯಮಂತ್ರಿಯಾಗಿದ್ದಾರೆ ಎಂದಿದ್ದಾರೆ.