ಬೆಂಗಳೂರು, ಜೂ.29(DaijiworldNews/AA): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಉಪಮುಖ್ಯಮಂತ್ರಿಗಳ ಸಂಖ್ಯೆಯ ಹೆಚ್ಚಳ ಮಾಡುವ ವಿಷಯ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ ಎಂದು ಕೇಂದ್ರ ಸಚಿವೆ ಶೋಭಾ ಕರೆಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆತಂಕರಿಕ ಜಗಳ ಆರಂಭವಾಗಿದೆ. ಇದರಿಂದಾಗಿ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತವಾಗಿವೆ ಎಂದರು. ಇನ್ನು ಹಾಲು, ತೈಲ ಬೆಲೆ ಮತ್ತು ನೋಂದಣಿ ಶುಲ್ಕವನ್ನು ರಾಜ್ಯ ಸರ್ಕಾರ ಏರಿಕೆ ಮಾಡುವ ಮೂಲಕ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಿನ್ನೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರಗಳು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕೆಲ ಪರೀಕ್ಷೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತು ಎಂದು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪ ಸುಳ್ಳು. ಸಂಸತ್ತಿನಲ್ಲಿ ಮಾತಾಡುವ ಅವಕಾಶ ಎಲ್ಲರಿಗೂ ಇದೆ, ರಾಷ್ಟ್ರಪತಿಯವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತಾಡಿದ ಬಳಿಕ ಅಭಿನಂದನಾ ಪ್ರಸ್ತಾವದಲ್ಲಿ ಯಾವುದೇ ಪಕ್ಷದ ಸಂಸದ ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಮಾತಾಡಬಹುದು. ಇದು ಮೊದಲಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಪರಿಸ್ಥಿತಿ ಹೀಗಿರುವಾಗ ರಾಷ್ಟ್ರಪತಿಯವರನ್ನು ಅಪಮಾನ ಮಾಡುವುದಕ್ಕೋಸ್ಕರ ಕಾಂಗ್ರೆಸ್ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದರು.