ನವದೆಹಲಿ, ಜೂ.30(DaijiworldNews/AA): ಬ್ರಿಟಿಷರ ಕಾಲದ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿನ ಬದಲಿಗೆ ರೂಪಿಸಲಾಗಿರುವ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿದೆ.
ಭಾರತೀಯ ದಂಡ ಸಂಹಿತೆಯು (ಐಪಿಸಿ) 'ಭಾರತೀಯ ನ್ಯಾಯ ಸಂಹಿತೆ'ಯಾಗಿ, ಅಪರಾಧ ಪ್ರಕ್ರಿಯಾ ಸಂಹಿತೆಯು 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ'ಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು 'ಭಾರತೀಯ ಸಾಕ್ಷ್ಯ ಕಾಯ್ದೆ'ಯಾಗಿ ಜಾರಿಗೆ ಬರಲಿದೆ. ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗುವುದರೊಂದಿಗೆ ವಸಾಹತು ಕಾಲದ ಕಾನೂನುಗಳಿಗೆ ಕೊನೆಯಾಗಲಿದೆ.
ಜಾರಿಗೆ ಬರಲಿರುವ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಯಾಗಿದೆ. ಝಿರೊ ಎಫ್ಐಆರ್, ಪೊಲೀಸ್ ದೂರುಗಳ ಆನ್ಲೈನ್ ದಾಖಲು, ಎಸ್ಎಂಎಸ್ನಂತಹ ಎಲೆಕ್ಟ್ರಾನಿಕ್ಸ್ ಮೂಲಕ ಸಮನ್ಸ್ ಪ್ರಕ್ರಿಯೆ ಮುಂತಾದವು ಒಳಗೊಂಡಿರುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಹೊಸ ಕಾನೂನುಗಳನ್ನು ಭಾರತೀಯರು ಭಾರತೀಯರಿಗಾಗಿ ಭಾರತೀಯ ಸಂಸತ್ತಿನಲ್ಲಿ ರೂಪಿಸಲಾಗಿದೆ. ವಸಾಹತುಶಾಹಿ ಕ್ರಿಮಿನಲ್ ಕಾನೂನುಗಳಿಗೆ ಕೊನೆಯಾಗಲಿದೆ' ಎಂದು ಹೇಳಿದ್ದಾರೆ.