ಬೆಂಗಳೂರು, ಜು.01(DaijiworldNews/AK): ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹೆಚ್ಚು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ 'ರಾಷ್ಟ್ರೀಯ ವೈದ್ಯರ ದಿನಾಚರಣೆ'ಯನ್ನು ಉದ್ಘಾಟಿಸಿ ಮಾತನಾಡಿ, ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಪಾಲಿಸುವುದು ಅತ್ಯಂತ ಅವಶ್ಯಕ. ರೋಗಿಯ ಪ್ರಾಣ ಉಳಿಸಿದರೆ ವೈದ್ಯರೇ ದೇವರಾಗುತ್ತಾರೆ. ತಮ್ಮ ವೃತ್ತಿಯಲ್ಲಿ ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ತೋರಬಾರದು. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅನಾಹುತವಾಗುತ್ತದೆ ಎಂಬ ಎಚ್ಚರವಿರಬೇಕು.
ಇದು ದೇವರ ಕೆಲಸ ಎಂದು ಮಾಡಿದರೆ ಸಮಾಜದಲ್ಲಿ ರೋಗಗಳನ್ನು ತಡೆಗಟ್ಟುವ , ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ರೋಗಗಳನ್ನು ತಡೆಗಟ್ಟುವುದನ್ನು ಕೂಡ ಆರೋಗ್ಯ ಇಲಾಖೆ ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕರೋನಾ ಸಂದರ್ಭದಲ್ಲಿ ವೈದ್ಯರ ಸೇವೆ ಮರೆಯಲಾಗದು:
ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೈದ್ಯೋ ನಾರಾಯಣೋ ಹರಿಃ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ಆರೋಗ್ಯ ರಕ್ಷಣೆ ಮಾಡುವವರು ವೈದ್ಯರು ಎಂದರು.ಕರೋನಾ ಸಂದರ್ಭದಲ್ಲಿ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಸೇವೆಯನ್ನು ಮರೆಯಲಿ ಸಾಧ್ಯವಿಲ್ಲ. ತಮ್ಮ ಜೀವದ ಹಂಗನ್ನು ತೊರೆದು ವೈದ್ಯರು ದುಡಿದಿದ್ದಾರೆ ಎಂದರು.
ಸಮಾಜದ ಆರೋಗ್ಯ ಕಾಪಾಡಲು ಸರ್ಕಾರವೂ ಪ್ರಯತ್ನ ಪಡುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿವೆ ಎಂದರು.ಸರ್ಕಾರಿ ಆಸ್ಪತ್ರೆಗಳಿಗೆ ಬಡವರೇ ಹೆಚ್ಚು ಬರುತ್ತಾರೆ. ವೈದ್ಯರು ಹಸನ್ಮುಖಿಗಳಾಗಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪ್ರತಿ ವೈದ್ಯರೂ ಮಾಡಬೇಕು ಎಂದರು.
ಸಿಡುಬು, ಪ್ಲೇಗು, ಪೋಲಿಯೋ ಮುಂತಾದ ಕಾಯಿಲೆಗಳು ನಿರ್ಮೂಲನೆಯಾಗಿದ್ದು, ಕೆಲವು ನಿಯಂತ್ರಣಕ್ಕೆ ಬಂದಿವೆ. ಇವನ್ನೂ ನಿರ್ಮೂಲನೆ ಮಾಡಲು ಸಾಧ್ಯವಿದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆಲ್ಲಾ ಕಾಯಿಲೆಗಳ ನಿರ್ಮೂಲನೆ ಹೆಚ್ಚು ಸಾಧ್ಯವಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, ಇದರ ಮೂಲೋಚ್ಚಾಟನೆ ಮಾಡಬೇಕು. ಈ ಬಗ್ಗೆ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ಸಾರ್ವಜನಿಕರೂ ಸಹ ಸರ್ಕಾರದೊಂದಿಗೆ ಕೈಜೋಡಿಸಬೇಕು. ಆಗ ಮಾತ್ರ ಇದರ ನಿವಾರಣೆ ಸಾಧ್ಯ ಎಂದರು.
ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದರೂ ಕೂಡ ಸಿಗರೇಟ್ ಸೇದುತ್ತಾರೆ. ಜನರು ಕೂಡ ಜಾಗೃತರಾಗಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು. ಹಿಂದೆ ತಮಗೂ ಸಿಗರೇಟ್ ಸೇದುವ ಅಭ್ಯಾಸವಿತ್ತು. ಅದರಿಂದಾಗಿ ಆಂಜಿಯೋಪ್ಲಾಸ್ಟಿ ಒಳಗಾಗಿದ್ದನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಸ್ಮರಿಸಿದರು.ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿ ಬದಲಾಯಿಸಿಕೊಂಡರೆ ಅನೇಕ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ವೈದ್ಯರ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ, ಆರ್ಥಿಕ ಶಕ್ತಿ ಹೊಂದಿದ್ದಾಗ ಮಾತ್ರ ಆರೋಗ್ಯಕರ ಸಾಮಾಜ ನಿರ್ಮಾಣ ಸಾಧ್ಯ ಎಂದರು. ವೈದ್ಯರು ಬಿ.ಸಿ.ರಾಯ್ ಅವರ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದೂ ಈ ಸಂದರ್ಭದಲ್ಲಿ ಸಿಎಂ ತಿಳಿಸಿದರು.
ಜೀವನ ಸಾಧನೆ ಹಾಗೂ ಇತರೆ ಪ್ರಶಸ್ತಿಗಳಿಗೆ ಭಾಜನರಾದ ವೈದ್ಯರನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಶಾಸಕ ಡಾ : ಎಂ.ಟಿ.ಶ್ರೀನಿವಾಸ್, ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ವೈದ್ಯರ ಸಂಘದ ಅಧ್ಯಕ್ಷರು ಡಾ:ವಿವೇಕ್ ದೊರೆ ಮೊದಲಾದವರು ಉಪಸ್ಥಿತರಿದ್ದರು.