ನವದೆಹಲಿ, ಜು.01(DaijiworldNews/AA): ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ದೆಹಲಿ ನ್ಯಾಯಾಲಯ 5 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿನಯ್ ಕುಮಾರ್ ಸಕ್ಸೇನಾ 2001ರಲ್ಲಿ ಮೇಧಾ ಪಾಟ್ಕರ್ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಇದೀಗ ಮೇಧಾ ಪಾಟ್ಕರ್ ಅವರಿಗೆ 5 ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ವಿ.ಕೆ ಸಕ್ಸೇನಾ ಅವರಿಗೆ 10 ಲಕ್ಷ ರೂ. ಪಾವತಿಸುವಂತೆಯೂ ಸೂಚಿಸಿದೆ. ಜೊತೆಗೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೇಧಾ ಪಾಟ್ಕರ್ ಅವರ ಶಿಕ್ಷೆಯನ್ನು ಆಗಸ್ಟ್ 1ರವರೆಗೆ ತಡೆ ಹಿಡಿಯಲಾಗಿದೆ.
ಷರತ್ತಿನ ಮೇಲೆ ತನ್ನನ್ನು ಬಿಡುಗಡೆ ಮಾಡಬೇಕು ಎಂದು ಪಾಟ್ಕರ್ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, 'ವಯಸ್ಸು ಮತ್ತು ಅನಾರೋಗ್ಯವನ್ನು ಪರಿಗಣಿಸಿ, ಹೆಚ್ಚಿನ ಶಿಕ್ಷೆ ನೀಡಲು ಭಯಸುವುದಿಲ್ಲ' ಎಂದು ತಿಳಿಸಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಟ್ಕರ್, ಸತ್ಯವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ನಾವು ಯಾರನ್ನೂ ದೂಷಿಸಲು ಪ್ರಯತ್ನಿಸಿಲ್ಲ. ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತೇವೆ. ನಾನು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತೇನೆ ಎಂದು ತಿಳಿಸಿದ್ದಾರೆ.