ನವದೆಹಲಿ, ಜು.02(DaijiworldNews/AA): ಇವಿಎಂ ಬಗ್ಗೆ ನಿನ್ನೆಯೂ ಭರವಸೆ ಇಲ್ಲ, ಇಂದು ಭರವಸೆ ಇಲ್ಲ. ಉತ್ತರ ಪ್ರದೇಶದಲ್ಲಿ 80ಕ್ಕೆ 80ಕ್ಕೆ ಸೀಟು ಗೆದ್ದರೂ ನಂಬಿಕೆ ಬರಲ್ಲ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಇವಿಎಂ ವಿರುದ್ಧ ಎಸ್ಪಿ ಹೋರಾಟ ನಡೆಸುತ್ತಲೇ ಇರುತ್ತದೆ. ಇವಿಎಂ ಮೂಲಕವೇ ಗೆದ್ದು ಇವಿಎಂ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶಕ್ಕೆ ಬಹಳ ಅನ್ಯಾಯವಾಗಿದ್ದು, ಕೇವಲ ಮೂಲಸೌಕರ್ಯಗಳ ವಿಚಾರದಲ್ಲಿ ಮಾತ್ರ ಅನ್ಯಾಯವಾಗಿಲ್ಲ. ಪ್ರಧಾನಿ ಮೋದಿ ಅವರು ತಾನು ದತ್ತು ಪಡೆದ ಗ್ರಾಮ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು. ಆದರೆ ಆ ಗ್ರಾಮ ಇನ್ನೂ ಅಭಿವೃದ್ಧಿಯಾಗಿಲ್ಲ. ಕಿತ್ತು ಹೋದ ರಸ್ತೆ, ವಿದ್ಯುತ್ ಕಡಿತ ಆಗುತ್ತಿದೆ. ದತ್ತು ಪಡೆದ ಬಳಿಕ ಅನಾಥ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಅಖಿಲೇಶ್ ಅವರ ಹೇಳಿಕೆಗೆ ರಾಹುಲ್ ಗಾಂಧಿ, ದಯಾನಿಧಿ ಮಾರನ್ ಸೇರಿದಂತೆ ಪ್ರತಿಪಕ್ಷ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.