ಬೆಂಗಳೂರು, ಜು.02(DaijiworldNews/AA): ಕರ್ನಾಟಕವನ್ನು ಎಲ್ಲಾ ವಲಯಗಳಲ್ಲೂ ಬರ್ಬಾದ್ ಮಾಡುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್ ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.
ಆರ್ಥಿಕ ಮುಗ್ಗಟ್ಟು ಕುರಿತು ಸರ್ಕಾರಕ್ಕೆ ಇಂಧನ ಇಲಾಖೆ ಬರೆದ ಪತ್ರ ಉಲ್ಲೇಖಿಸಿ ಇಂದು ತನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ ಹಾಳು ಮಾಡಿದ್ದು, ಇದರ ಸಂಪೂರ್ಣ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ರಾಜ್ಯದ ಇಂಧನ ಇಲಾಖೆ ತನ್ನ ದೈನಂದಿನ ಚಟುವಟಿಕೆಗಳಿಗೂ ಸಹ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಹೆಚ್ಚಿನ ಸಾಲ ಪಡೆಯಲು ಅನುಮತಿ ನೀಡಿ, ಇಲ್ಲವೇ ಸರ್ಕಾರದಿಂದ ಬರಬೇಕಿರುವ ಬಾಕಿಯನ್ನು ಪಾವತಿಸಿ ಎಂದು ಪತ್ರ ಬರೆದಿರುವುದು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಷ್ಟರ ಮಟ್ಟಿಗೆ ಹದಗೆಡಿಸಿದೆ ಎಂಬುದರ ಸುಸ್ಪಷ್ಟ ನಿದರ್ಶನ ಎಂದು ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯ ಅವರೇ ಕರ್ನಾಟಕ ಬರ್ಬಾದ್ ಆಗಿದೆ ಎಂಬುದು ನಿಮ್ಮ ಇಂಧನ ಇಲಾಖೆ ಬರೆದ ಪತ್ರದಿಂದಲೇ ಕೊನೆಗೂ ರುಜುವಾತಾಗಿದೆ. ಸಿದ್ದರಾಮಯ್ಯನವರು, ಕರ್ನಾಟಕ ಕಂಡ ಅತ್ಯಂತ ದುರ್ಬಲ ಸಿಎಂ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ..!? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.