ರಾಂಚಿ, ಜು 04 (DaijiworldNews/ AK): ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಇಂದು (ಗುರುವಾರ) ಸಂಜೆ ಜಾರ್ಖಂಡ್ನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೇಮಂತ್ ಸೊರೆನ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮಾಜಿ ಮುಖ್ಯಮಂತ್ರಿಯಾಗಿರುವ ಹೇಮಂತ್ ಸೋರೆನ್ ಭೂ ಹಗರಣ ಪ್ರಕರಣದಲ್ಲಿ ಸುಮಾರು 5 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ನಂತರ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಜಾರ್ಖಂಡ್ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ಹೇಮಂತ್ ಸೊರೆನ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹೇಮಂತ್ ಸೊರೆನ್ ಬಂಧನದ ನಂತರ ಫೆಬ್ರವರಿ 2ರಂದು ಜಾರ್ಖಂಡ್ನ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೆನ್ ರಾಜೀನಾಮೆ ನೀಡಿದ ನಂತರ ಜೆಎಂಎಂ ಮುಖ್ಯಸ್ಥ ಹೇಮಂತ್ ಸೋರೆನ್ ಬುಧವಾರ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಹೇಮಂತ್ ಸೊರೆನ್ ಅವರು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜೂನ್ 28ರಂದು ಜೈಲಿನಿಂದ ಬಿಡುಗಡೆಗೊಂಡರು.