ಬೆಂಗಳೂರು, ಜು.05(DaijiworldNews/AA): ವಿವಿಧ ರಸ್ತೆ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಒಂದು ತಿಂಗಳೊಳಗೆ 2 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಿದ್ಧವಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನುದಾನ ನೀಡಲು ಸಿದ್ಧವಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಡಬೇಕು ಎಂದು ತಿಳಿಸಿದರು.
ಇತ್ತೀಚೆಗಷ್ಟೇ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡ ಅವರು, ರಸ್ತೆ ಕಾಮಗಾರಿಗೆ ಒಂದು ತಿಂಗಳಲ್ಲಿ ರಾಜ್ಯಕ್ಕೆ 2 ಲಕ್ಷ ಕೋಟಿ ರೂ. ನೀಡಲು ಸಿದ್ಧ ಎಂದು ಹೇಳಿದ್ದೆ. ಆದರೆ ಅವರಿಗೆ ನನ್ನ ಷರತ್ತೆಂದರೆ ಭೂಸ್ವಾಧೀನ ಮಾಡಿಕೊಳ್ಳುವುದು. ಅರಣ್ಯ ಇಲಾಖೆ ಮತ್ತಿತರ ಸಂಬಂಧಪಟ್ಟ ವಿಭಾಗಗಳಿಂದ ಅನುಮತಿ ಪಡೆಯುವುದು. ಇಂಥ ಕೆಲವು ಅಡೆತಡೆಗಳಿಂದಾಗಿ ಕರ್ನಾಟಕದಲ್ಲಿ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ನಾನು ಗಾಳಿಯಲ್ಲಿ ರಸ್ತೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಸ್ತೆ ಯೋಜನೆಗಳ ಪ್ರಸ್ತಾಪಗಳನ್ನು ಮುಂದಿಟ್ಟುಕೊಂಡು ರಾಜ್ಯದದ ಅನೇಕ ಸಂಸದರು ತಮ್ಮನ್ನು ಭೇಟಿಯಾಗಲು ಬರುತ್ತಾರೆ. ಅವರ ಬೇಡಿಕೆ ಏನೇ ಇರಲಿ, ನಾನು ಅನುಮೋದಿಸಿದ್ದೇನೆ. ಅವರಿಗಾಗಿ 3.5 ಲಕ್ಷ ಕೋಟಿ ರೂ.ಗಳ ಕಾಮಗಾರಿಯನ್ನು ಮಂಜೂರು ಮಾಡಿದ್ದೇನೆ. ಕೆಲಸ ಮಾಡಿರಿ ಮತ್ತು ನಾವು ಅದಕ್ಕೆ ಹಣ ನೀಡುತ್ತೇವೆ. ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ ಎಂದರು.