ಮೈಸೂರು, ಜು.05(DaijiworldNews/AK):ಮುಡಾ ಹಗರಣ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿಕಾಂತ ರೆಡ್ಡಿ ಅವರನ್ನು ನಿಯೋಜಿಸಲಾಗಿದೆ. ರೆಡ್ಡಿ ಅವರು ಈ ಹಿಂದೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಈಗ ಮೈಸೂರು ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ವರ್ಗಾವಣೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ರಾಜೇಂದ್ರ ಅವರು 2022ರ ಅ.27 ರಂದು ಡಿಸಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಎರಡು ವರ್ಷಕ್ಕೂ ಮುನ್ನವೇ ಅವರನ್ನು ವರ್ಗಾವಣೆ ಮಾಡಲಾಗಿದೆ.