ಬೆಳಗಾವಿ, ಜು.06(DaijiworldNews/AA): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅತೀ ಹೆಚ್ಚು ದುರುಪಯೋಗ ಮುಡಾದಲ್ಲಿ ಆಗಿದೆ. ಸಿಬಿಐಗೆ ಕೊಟ್ಟರೆ ಸಾವಿರಾರು ಕೋಟಿ ರೂ. ಹಗರಣ ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು.
ಒಮ್ಮೆ ನೋಟಿಫೈ ಮಾಡಿ ನಂತರ ಡಿನೋಟಿಫೈ ಮಾಡಿದ್ದಾರೆ. ಲೇಔಟ್ ಆದ ನಂತರ 50:50 ಕೊಡಿ ಎಂದು ಕೇಳಿದ್ದಾರೆ. ಆ ನಿಯಮ ಎಲ್ಲಿಯೂ ಕೂಡ ಇಲ್ಲ. ಲೇಔಟ್ ಮಾಡುವಾಗ ಏಕೆ ಅಧಿಕಾರಿಗಳು ಬಿಟ್ಟು ಕೊಟ್ಟರು. ಆವಾಗಲೇ ತಡೆ ಹಿಡಿಯಬಹುದಿತ್ತು ಆದರೆ ಅಧಿಕಾರಿಗಳು ಸುಮ್ಮನೆ ಕುಳಿತರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮದ ಕೋಟ್ಯಾಂತರ ರೂಪಾಯಿ ಹಗರಣದ ಬಳಿಕ ಮುಡಾ ಹಗರಣವು ಸರ್ಕಾರಕ್ಕೆ ಅಘಾತ ಉಂಟುಮಾಡಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಿವಾದಕ್ಕೆ ಕಾರಣವಾಗಿದೆ.