ಬೆಂಗಳೂರು, ಜು.06(DaijiworldNews/AA): ಡೆಂಗ್ಯೂ ನಮ್ಮ ರಾಜ್ಯಾದ್ಯಂತ ಹರಡುತ್ತಿದೆ. ಕೋವಿಡ್ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಇದನ್ನು 'ವೈದ್ಯಕೀಯ ತುರ್ತು ಸ್ಥಿತಿ' ಎಂದು ಘೋಷಿಸಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಆಗ್ರಹಿಸಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ಜ್ವರ ನಿಯಂತ್ರಣ ಎಂದರೆ ಸೊಳ್ಳೆಗಳ ನಿಯಂತ್ರಣ. ಡೆಂಗ್ಯೂ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯವಾದುದು. ಡೆಂಗ್ಯೂ ಜ್ವರ ನಿಯಂತ್ರಣ ಆಗದೆ ಇದ್ದಲ್ಲಿ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಕಾಯಿಲೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಂಥ ಆಸ್ಪತ್ರೆ, ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಂಥ ಲ್ಯಾಬೊರೇಟರಿಗಳನ್ನು ಮುಚ್ಚಬೇಕು . ಫ್ಲೈಓವರ್, ಅಂಡರ್ ಪಾಸ್, ಅಗೆದ ರಸ್ತೆ, ಸೇತುವೆ ಮೊದಲಾದವು ಸಕಾಲದಲ್ಲಿ ಮುಗಿಯುತ್ತಿಲ್ಲ. ಎಲ್ಲವೂ ಅರ್ಧರ್ಧವಾಗಿ ನಿಲ್ಲುತ್ತವೆ. ಮಳೆ ಬಂದಾಗ ಅಲ್ಲೆಲ್ಲ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದರು.
ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡಬೇಕಿದೆ. ಡೆಂಗ್ಯೂ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕಿದೆ. ಈ ಟಾಸ್ಕ್ ಫೋರ್ಸ್, ಪರಿಣತರ ಸಲಹೆ ಪಡೆಯಬೇಕು. ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಒಬ್ಬ ವೈದ್ಯರು ಸೇರಿ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲ ಶಾಲೆ- ಕಾಲೇಜುಗಳಿಗೆ ಸುತ್ತೋಲೆ ಕಳಿಸಿ, ಶಾಲಾ ಆಡಳಿತದ ಜೊತೆ ಸಭೆ ನಡೆಸಬೇಕು. ಡೆಂಗ್ಯೂ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆಯೇ ಇಲ್ಲ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಮಾತನಾಡಿ, ರಾಜ್ಯದಲ್ಲಿ ಸರಕಾರ ದಿವಾಳಿ ಅಂಚಿನಲ್ಲಿದೆ. ರಾಜ್ಯದ ಆರೋಗ್ಯ ಇಲಾಖೆ ಐಸಿಯುಗೆ ಸೇರಿದಂತಿದೆ ಎಂದು ಟೀಕಿಸಿದರು.
ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಡೆಂಗ್ಯೂ ಮಹಾಮಾರಿ ಇದೆ. ಕಳೆದ ಒಂದು ತಿಂಗಳಿನಿಂದ ಅದು ರಾಜ್ಯವನ್ನೇ ಆವರಿಸಿದೆ. ಡೆಂಗ್ಯೂ, ಮಲೇರಿಯ, ವೈರಲ್ ಜ್ವರ ಸಾಮಾನ್ಯವಾಗಿ ಋತುವಿಗೆ ಅನುಗುಣವಾಗಿ ಬರುತ್ತವೆ. ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇವಲ ಪ್ರವಾಸದಲ್ಲಿ ಇರುತ್ತಾರೆ. ಅವರ ಪಕ್ಷದ ಚಟುವಟಿಕೆಯಲ್ಲಿ ಅವರು ಬ್ಯುಸಿ ಇರುತ್ತಾರೆ. ಆದರೆ, ತಮ್ಮ ಇಲಾಖೆ ಜವಾಬ್ದಾರಿ ಕಡೆ ಗಮನ ಹರಿಸಿಲ್ಲ ಎಂದು ತಿಳಿಸಿದರು.
ರಕ್ತ ಪರೀಕ್ಷೆ, ಡೆಂಗ್ಯೂ ಪರೀಕ್ಷೆಗೆ ಖಾಸಗಿಯವರು ನಿಯಮ ಮೀರಿ ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ. ಇದೊಂದು ಧಂದೆಯಾಗಿದೆ. ಆದರೆ, ಸಚಿವರು ಇದರ ಕಡೆ ಗಮನ ಹರಿಸಿಲ್ಲ ಎಂದು ದೂರಿದರು. ಸರಕಾರ ಈ ಕೂಡಲೇ ಇವುಗಳ ಕಡೆ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ ಕೆ, ಸಹ ಸಂಚಾಲಕ ಡಾ.ಯೋಗಾನಂದ, ರಾಜ್ಯ ವಕ್ತಾರ ಅಶೋಕ್ ಕೆ.ಎಂ. ಗೌಡ ಅವರು ಭಾಗವಹಿಸಿದ್ದರು.