ನವದೆಹಲಿ, ಜು.07(DaijiworldNews/AK): ದೆಹಲಿಯಲ್ಲಿ ಡೆಂಗ್ಯೂ, ಚಿಕನ್ಗುನ್ಯಾ ಮತ್ತು ಮಲೇರಿಯಾದಂತಹ ಕಾಯಿಲೆಗಳು ತಾಂಡವಾಡುತ್ತಿದ್ದು, ಶಾಲಾ ಮಕ್ಕಳು ಇನ್ನು ಮುಂದೆ ಪೂರ್ಣ ತೋಳಿನ ಸಮವಸ್ತ್ರ ಧರಿಸಿ ಶಾಲೆಗೆ ಬರುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.
ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರ ಅಧ್ಯಕ್ಷತೆಯಲ್ಲಿ ದೆಹಲಿ ಸಚಿವಾಲಯದಲ್ಲಿ ಸಭೆ ನಡೆಯಿತು.ಶನಿವಾರ ನಡೆದ ಈ ಸಭೆಯಲ್ಲಿ ಸಚಿವ ಸೌರಭ್ ಭಾರದ್ವಾಜ್ ಅವರು ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಇದುವರೆಗೆ ನಡೆದಿರುವ ಸಿದ್ಧತೆಗಳ ಕುರಿತು ಮಾಹಿತಿ ಪಡೆದು ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದರು.
ಎಲ್ಲ ಮಕ್ಕಳು ವಾರಕ್ಕೊಮ್ಮೆ ತಮ್ಮ ಮನೆ, ಮಡಕೆಗಳನ್ನು ಪರಿಶೀಲಿಸಿ ಎಲ್ಲೆಂದರಲ್ಲಿ ನೀರು ಸಂಗ್ರಹವಾಗಿದೆಯೇ, ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಿ ಕಾರ್ಡ್ನಲ್ಲಿ ವಿವರ ಬರೆದು ಶಾಲೆಗೆ ಸಲ್ಲಿಸುತ್ತಾರೆ. ಡೆಂಗ್ಯೂ, ಮಲೇರಿಯಾದಂತಹ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವ ಕಡೆ ಔಷಧ ಸಿಂಪಡಿಸಲಾಗುತ್ತಿದೆ.
ವಿದ್ಯಾರ್ಥಿಗಳು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವಂತೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಹಾಗೂ ಎಲ್ಲಾ ಮಕ್ಕಳು ಪೂರ್ಣ ತೋಳಿನ ಬಟ್ಟೆ ಧರಿಸಿ ಬರುವಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸಚಿವ ಸೌರಭ್ ಭಾರದ್ವಾಜ್ ಸೂಚಿಸಿದರು.