ಬೆಂಗಳೂರು, ಜು. 07(DaijiworldNews/AA): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಡೆಂಗ್ಯೂ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಹುದ್ದೆ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರ ಮಧ್ಯೆ ಝಿಕಾ ಹಾಗೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಮುಂದಿನ ಅಧಿವೇಶನದಲ್ಲಿ ಡೆಂಗ್ಯೂ ಹಾಗೂ ಝಿಕಾ ಬಗ್ಗೆ ಚರ್ಚೆ ಮಾಡಲಿದ್ದೇವೆ. ಆಸ್ಪತ್ರೆಗಳಲ್ಲಿ ಬಹಳಷ್ಟು ಝಿಕಾ ಹಾಗೂ ಡೆಂಗ್ಯೂ ಪೀಡಿತರು ದಾಖಲಾಗುತ್ತಿದ್ದು, ಅವರಿಗೆ ಸರಿಯಾಗಿ ಔಷಧಿ ದೊರೆಯುತ್ತಿಲ್ಲ. ಔಷಧಿಯ ದರವನ್ನೂ ಹೆಚ್ಚಿಸಿದ್ದು, ಡೆಂಗ್ಯೂ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಯಾರೂ ಪಾಲಿಸುತ್ತಿಲ್ಲ ಎಂದು ತಿಳಿಸಿದ್ದಾರೆ.