ಮುಂಬೈ, ಜು. 08(DaijiworldNews/AA): ಬಿಎಂಡಬ್ಲ್ಯೂ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾದರ್ ಸೆವ್ರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿ ಮಿಹಿರ್ ಶಾ ಅವರ ತಂದೆ ಶಿವಸೇನಾ ನಾಯಕ ರಾಜೇಶ್ ಶಾ ಅವರಿಗೆ 15,000 ನಗದು ಪಾವತಿಸಿ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ಇದೇ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಕೂಡಲೇ ರಾಜೇಶ್ ಶಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಚಾಲಕ ರಾಜರುಷಿ ಬಿಡಾವತ್ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಮುಂಬೈನ ವರ್ಲಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆಯ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರು ಹಿಟ್ ಆಂಡ್ ರನ್ ಪ್ರಕರಣದಲ್ಲಿ ಮಿಹಿರ್ ಶಾಗೆ ಸ್ಥಳದಿಂದ ಓಡಿಹೋಗಲು ಸಹಾಯ ಮಾಡಿದ್ದಕ್ಕಾಗಿ ಅವರನ್ನು ಅರೆಸ್ಟ್ ಮಾಡಲಾಯಿತು.
ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿ, ಅವರ ಪತಿಗೆ ಗಾಯಗಳಾಗಿತ್ತು. ಶಿವಸೇನಾ ನಾಯಕರೊಬ್ಬರ ಪುತ್ರ ಮಿಹಿರ್ ಶಾ ಈ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಪ್ರಕರಣದ ಆರೋಪಿ ಮಿಹಿರ್ ಶಾ ಅವರ ತಂದೆ ರಾಜೇಶ್ ಶಾ ಅಪಘಾತದ ನಂತರ ತನ್ನ ಮಗನಿಗೆ ಹಲವು ಬಾರಿ ಕರೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಸ್ತೆ ಅಪಘಾತಕ್ಕೂ ಮುನ್ನ ಪ್ರಮುಖ ಆರೋಪಿ ಮಿಹಿರ್ ಶಾ ಮದ್ಯ ಕುಡಿದಿದ್ದ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕ ಸಾಕ್ಷ್ಯವೂ ಲಭ್ಯವಾಗಿದ್ದು, ಮುಂಬೈನ ಜುಹುದಲ್ಲಿರುವ ಬಾರ್ವೊಂದರಲ್ಲಿ 18,730 ರೂ.ನಷ್ಟು ಬಿಲ್ ಮಾಡಿದ್ದಾನೆ ಎಂಬ ಮಾಹಿತಿ ದೊರೆತಿದೆ.