ಶ್ರೀನಗರ, ಜು. 08(DaijiworldNews/AA): ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಇಂದು ಮಧ್ಯಾಹ್ನ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಕೆಲ ಸೇನಾ ವಾಹನಗಳು ಈ ಪ್ರದೇಶದಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು. ಸೇನೆಯ ವಾಹನ ತೆರಳುವ ಬಗ್ಗೆ ಮಾಹಿತಿ ಪಡೆದಿದ್ದ ಉಗ್ರರು, ಯೋಜನೆ ರೂಪಿಸಿ, ದಾಳಿ ನಡೆಸಿದ್ದಾರೆ. ಇನ್ನು ಉಗ್ರರು ಗುಂಡಿನ ದಾಳಿ ನಡೆಸಿದ ನಂತರ, ಸೈನಿಕರೂ ಪ್ರತಿದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಲೇ ಇದ್ದಾರೆ. ಇದಕ್ಕೆ ಭಾರತೀಯ ಸೇನೆಯ ಯೋಧರು ಪ್ರತಿದಾಳಿ ನಡೆಸುತ್ತಲೇ ಇದ್ದಾರೆ. ಕಳೆದೆರಡು ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದಂತಹ 2ನೇ ದಾಳಿಯಾಗಿದೆ. ಜೊತೆಗೆ ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ.