ಬೆಂಗಳೂರು,ಮೇ16(DaijiworldNews/AZM)ಈ ಬಾರಿ ರಾಜ್ಯಕ್ಕೆ ಮುಂಗಾರು ಮಳೆ ತಡವಾಗಿ ಬರಲಿದೆ. ಜೂ.8ಕ್ಕೆ ಇಲ್ಲವಾದಲ್ಲಿ 9ರಂದು ಮುಂಗಾರು ಮಳೆ ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಜೂ.6ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಹಿನ್ನಲೆ ರಾಜ್ಯಕ್ಕೆ ಜೂ.8ರಂದು ಇಲ್ಲವಾದಲ್ಲಿ 9ರಂದು ಮಳೆ ಬೀಳುವ ಸಾಧ್ಯತೆ ಇದೆ.
ಮುಂಗಾರು ಮಾರುತಗಳ ತೀವ್ರತೆ ಹೆಚ್ಚಾಗಿದ್ದರೆ ಒಂದೇ ದಿನಕ್ಕೆ ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸುತ್ತದೆ. ಮಾರುತಗಳ ತೀವ್ರತೆ ಕಡಿಮೆಯಿದ್ದರೆ ಹೆಚ್ಚಿನ ಅವಧಿ ಕೇರಳದಲ್ಲಿಯೇ ಉಳಿಯುತ್ತದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಖಾಸಗಿ ಹವಾಮಾನ ಮಾಪನ ಸಂಸ್ಥೆ ಸ್ಕೈಮೆಟ್ ಪ್ರಕಾರ ಜೂ. 4ಕ್ಕೆ ಮುಂಗಾರು ಕೇರಳ ಪ್ರವೇಶಿಸಲಿದೆ. ಆದರೆ ಭಾರತೀಯ ಹವಾಮಾನ ಸಂಸ್ಥೆ ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಜೂ.6ರಂದು ಕೇರಳಕ್ಕೆ ಪ್ರವೇಶಿಸಲಿದೆ ಎಂದಿದೆ. ಆದರೂ ಮುಂಗಾರು ಪ್ರವೇಶದ ಅವಧಿ ನಾಲ್ಕು ದಿನ ಆಚೀಚೆ ಆಗಲೂಬಹುದು ಎಂದೂ ಹವಾಮಾನ ಇಲಾಖೆ ಹೇಳಿದೆ. ಮೇ 18-19ರ ವೇಳೆಗೆ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಬಂಗಾಲ ಕೊಲ್ಲಿ ಭಾಗಗಳಲ್ಲಿ ಮಾನ್ಸೂನ್ ಮೂಡುವ ಚಿಹ್ನೆಗಳು ಕಾಣಿಸಿಕೊಳ್ಳಲಿದ್ದು, ಕೇರಳ ಕರಾವಳಿಗೆ ಜೂನ್ 6ರ ಹೊತ್ತಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್1ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸುತ್ತಿತ್ತು. ಈಗ ಐದರಿಂದ ಆರು ದಿನ ತಡವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.
ಸಾಮಾನ್ಯವಾಗಿ ಮಾನ್ಸೂನ್ ಆಗಮನದ ಸಮಯವೂ ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಸರಕಾರಿ ಹವಾಮಾನ ಇಲಾಖೆಯ ಪ್ರಕಾರ ಶೇ. 96ರಷ್ಟು ಅಂದರೆ, ಸಾಮಾನ್ಯಕ್ಕಿಂತ ಸ್ವಲ್ಪವೇ ಕಡಿಮೆ ಮಳೆಯಾಗಲಿದೆ ಎಂದು ಅಂದಾಜು ಮಾಡಿದ್ದರೆ, ಖಾಸಗಿ ಸಂಸ್ಥೆ ಸ್ಕೈಮೆಟ್ ಶೇ. 93ರಷ್ಟು ಮಳೆಯಾಗಲಿದೆ ಎಂದಿದೆ.