ದೆಹಲಿ, ಜು. 10(DaijiworldNews/AA): ಜೀವನದಲ್ಲಿ ಯಶಸ್ವಿಯಾಗಲು ಗುರಿಯೊಂದಿಗೆ ತಾಳ್ಮೆಯೂ ಕೂಡ ಮುಖ್ಯವಾಗಿದೆ. ಏಕೆಂದರೆ ಕೆಲವೊಮ್ಮೆ ನಾವು ಗುರಿಯನ್ನು ಹಲವಾರು ಪ್ರಯತ್ನಗಳ ನಂತರ ತಲುಪುತ್ತೇವೆ. ಹೀಗೆ ಹಲವಾರು ಪ್ರಯತ್ನಗಳ ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪೂಜ್ಯ ಪ್ರಿಯದರ್ಶಿನಿ ಅವರ ಯಶೋಗಾಥೆ ಇದು.
ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪೂಜ್ಯ ಪ್ರಿಯದರ್ಶಿನಿ ಅವರು, ಬಿಕಾಂನಲ್ಲಿ ಪದವಿ ಪಡೆದರು. ಹಾಗೂ ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಬಳಿಕ ಹೆಸರಾಂತ ಕಂಪನಿಗಳಿಂದ ಉದ್ಯೋಗ ಆಫರ್ ಗಳನ್ನು ಪಡೆದ ಅವರು, ಕೊನೆಗೆ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎರಡು ವರ್ಷ ಕೆಲಸ ಮಾಡುತ್ತಾರೆ.ಆದರೆ ಪೂಜ್ಯ ಪ್ರಿಯದರ್ಶಿನಿ ಅವರಿಗೆ ತಮ್ಮ ವೃತ್ತಿಯಲ್ಲಿ ತೃಪ್ತಿ ಇರಲಿಲ್ಲ. ದೇಶಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕೆಂದು ಅವರು ಬಯಸಿದ್ದರು.
2013ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾಗುತ್ತಾರೆ. 2 ಪ್ರಯತ್ನಗಳ ನಂತರ, ಸರಿಯಾಗಿ ತಯಾರಾಗಲು ಅವಳು ಮೂರು ವರ್ಷಗಳ ವಿರಾಮವನ್ನು ತೆಗೆದುಕೊಂಡಳು. 2016 ರಲ್ಲಿ, ಅವರು ಸಂದರ್ಶನ ಸುತ್ತಿನವರೆಗೆ ಅರ್ಹತೆ ಪಡೆದರು. ಆದರೆ ಈ ಸುತ್ತಿನಲ್ಲಿ ಅವರು ಅನುತ್ತೀರ್ಣರಾಗುತ್ತಾರೆ. 2017 ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದ ಅವರು, ಈ ಬಾರಿಯೂ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ.
ಬಳಿಕ ಪೂಜ್ಯ ಪ್ರಿಯದರ್ಶಿನಿ ಅವರು ಯುಪಿಎಸ್ಸಿ ಪರೀಕ್ಷೆಯನ್ನು ತೊರೆಯಲು ನಿರ್ಧಾರ ಮಾಡುತ್ತಾರೆ.
ಆದರೆ ಪೂಜ್ಯ ಪ್ರಿಯದರ್ಶಿನಿ ಅವರ ಪೋಷಕರು ಅವರಿಗೆ ಆತ್ಮಸ್ಥೈರ್ಯ ತುಂಬುತ್ತಾರೆ. ಅದರಂತೆ ಅವರು 2018ರಲ್ಲಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 11ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಅಂತಿಮವಾಗಿ ಯಶಸ್ವಿಯಾದ ಅವರು ಐಎಫ್ಎಸ್ ಅಧಿಕಾರಿಯಾಗಲು ಆಯ್ಕೆ ಮಾಡಿಕೊಂಡರು. ಪ್ರಸ್ತುತ ಪೂಜ್ಯ ಪ್ರಿಯದರ್ಶಿನಿ ಅವರು ಫ್ರಾನ್ಸ್ನಲ್ಲಿ ರಾಜತಾಂತ್ರಿಕರಾಗಿ ಕೆಲಸ ಮಾಡುತ್ತಿದ್ದಾರೆ.