ವಾರಣಾಸಿ, ಜು 11(DaijiworldNews/MS): ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದಿರುವುದಾಗಿ ಒಪ್ಪಿಕೊಂಡ 15 ವರ್ಷದ ಬಾಲಕನನ್ನು ಗಾಜಿಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜುಲೈ 7 ಮತ್ತು 8 ರ ಮಧ್ಯರಾತ್ರಿ ಘಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮವನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ಪ್ರಕರಣದ ಬೆನ್ನುಹಚ್ಚಿದ ಪೊಲೀಸರು ಇದೀಗ ಬಾಲಾಪರಾಧಿಯನ್ನು ಬಂಧಿಸಿದ್ದಾರೆ. ತನ್ನ ಸ್ವಂತ ತಂದೆ ತಾಯಿ ಹಾಗೂ ಸಹೋದರ ಕತ್ತು ಸೀಳಲು ಬಳಸಿದ ಹರಿತವಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ . ತಂದೆ ಮುನ್ಷಿ ಬಿಂದ್ (45), ತಾಯಿ ದೇವಂತಿ ಬಿಂದ್(40) ಮತ್ತು ಸಹೋದರನ ಹತ್ಯೆ ಮಾಡಿದ್ದಾನೆ.
ಕೆಲ ದಿನಗಳ ಹಿಒಂದೆಯೇ ಮೂವರನ್ನು ಕೊಲ್ಲಲು ನಿರ್ಧರಿಸಿದ್ದೆ, ಆದರೆ ಸಾಧ್ಯವಾಗಲಿಲ್ಲ. ಭಾನುವಾರ ರಾತ್ರಿ, ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದಾಗ ಮದ್ಯ ಸೇವಿಸಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಂದ ಬಾಲಕ ತಂದೆ, ತಾಯಿ ಹಾಗೂ ಸಹೋದರನ ಕತ್ತು ಸೀಳಿದ್ದಾನೆ. ಅಪರಾಧ ಮಾಡಿದ ನಂತರ, ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಲದಲ್ಲಿ ಚಾಕುವನ್ನು ಬಚ್ಚಿಟ್ಟು ಹತ್ತಿರದ ಮದುವೆಯ ಪೂರ್ವ ಸಮಾರಂಭದಲ್ಲಿಆರ್ಕೆಸ್ಟ್ರಾ ಪ್ರದರ್ಶನವನ್ನು ನೋಡಲು ಹೋಗಿದ್ದಾನೆ. ಬಳಿಕ ಬೆಳಗಿನ ಜಾವ 1.45 ರ ಸುಮಾರಿಗೆ ಮನೆಗೆ ಹಿಂದಿರುಗಿದ ಬಾಲಕ ಮನೆಯವರನ್ನು ಯಾರೋ ಕೊಂದು ಹೋಗಿರುವುದಾಗಿ ಗ್ರಾಮಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ಪೊಲೀಸ್ ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.