ಬೆಂಗಳೂರು, ಜು 11(DaijiworldNews/ AK): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಎಐಸಿಸಿಯ ಸತ್ಯಶೋಧನಾ ತಂಡವನ್ನು ಸ್ವಾಗತಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸುವ ಅವಶ್ಯಕತೆ ಇರಲಿಲ್ಲ. ನಿರ್ದಿಷ್ಟ ಕೋಟಿ ರೂ. ಗಳವರೆಗೆ ಅವ್ಯವಹಾರ ನಡೆದಿದ್ದರೆ ಸಿಬಿಐಗೆ ದಾಳಿ ನಡೆಸುವ ಅವಕಾಶವಿದೆ, ಅದರೆ ಈಡಿಗೆ ಇಲ್ಲ ಎಂದು ಶಿವಕುಮಾರ್ ಹೇಳಿದರು.
ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ, ಮತ್ತು ನಾಗೇಂದ್ರ ಸ್ವಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದಾರೆ, ಕಾನೂನು ಪ್ರಕಾರ ನಡೆಯಬೇಕಿರುವ ಪ್ರಕ್ರಿಯೆಗಳೆಲ್ಲ ನಡೆಯುತ್ತಿವೆ ಎಂದುಹೇಳಿದರು. ಇಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತೀಕಾರದ ಕ್ರಮವಾಗಿ ಇಡಿ ದಾಳಿ ನಡೆದಿದೆಯೇ ಅಂತ ಕೇಳಿದ್ದಕ್ಕೆ ಶಿವಕುಮಾರ್, ಅವರ ತನಿಖೆಯೆಲ್ಲ ಮುಗಿದ ಬಳಿಕ ಮಾತಾಡುವುದಾಗಿ ಹೇಳಿದರು.