ಬೆಂಗಳೂರು, ಜು 12(DaijiworldNews/ AK): ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಜುಲೈ 31ರ ವರೆಗೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಬಳಿ ಡಿಕೆಶಿ ಉತ್ತರಿಸಿದರು.
ಕಾವೇರಿ ನೀರಿನ ವಿಚಾರವಾಗಿ ಮುಂದೆ ಏನು ಮಾಡಬೇಕೆಂದು ಅನಿಲ್ ದಿವಾನ್, ಕಾತರಕಿ ಸೇರಿದಂತೆ ಕಾನೂನು ತಜ್ಞರ ತಂಡದ ಜೊತೆ ಚರ್ಚೆ ಮಾಡಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇವೆ ಎಂದರು.
ಮುಡಾ ಹಗರಣದ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕುರಿತು ಪ್ರತಿಕ್ರಿಯಿಸಿ , ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ಸಮಯ ಬಂದಾಗ ನಾವು ಏನು ಉತ್ತರ ನೀಡಬೇಕೋ ನೀಡುತ್ತೇವೆ. ಮುಡಾದಲ್ಲಿ ಏನೇ ಹಗರಣ ನಡೆದಿದ್ದರೂ ಅದು ಬಿಜೆಪಿ ಅವಧಿಯಲ್ಲಿ ನಡೆದಿದೆ.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇ.ಡಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ವಾಲ್ಮೀಕಿ ನಿಗಮದ ಹಗರಣದ ಕುರಿತು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಅವರ ತನಿಖೆ ಬಗ್ಗೆ ತಿಳಿದು ನಂತರ ಮಾತನಾಡುತ್ತೇನೆ ಎಂದು ಹೇಳಿದರು.