ಬೆಂಗಳೂರು, ಜು. 15(DaijiworldNews/AA): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕೋಟ್ಯಂತರ ರೂ. ಹಣ ಲೂಟಿ ಮಾಡಲು ನಕಲಿ ವ್ಯಕ್ತಿಯನ್ನು ಸೃಷ್ಟಿ ಮಾಡಿ ಹುದ್ದೆಯನ್ನು ಕೂಡ ನೀಡಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ವಾಲ್ಮೀಕಿ ನಿಗಮದ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಪ್ರಕರಣದ ತನಿಖೆಯನ್ನು ಇಡಿ ಕೈಗೆತ್ತಿಗೊಂಡ ಬಳಿಕ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರ ಬರುತ್ತಿದೆ. ಇದೀಗ ಎಂಡಿ ಪದ್ಮನಾಭ್ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ನಕಲಿ ವ್ಯಕ್ತಿಯನ್ನೇ ಸೃಷ್ಟಿಸಿ ನಿಗಮದಲ್ಲಿ ಹುದ್ದೆಯನ್ನು ನೀಡಿದ್ದರು. ಈ ನಕಲಿ ವ್ಯಕ್ತಿ 45 ಕೋಟಿ ರೂ. ಹಣ ವ್ಯವಹಾರ ಮಾಡಿದ್ದ ಎಂದು ತಿಳಿದುಬಂದಿದೆ.
ಎಂಡಿ ಪದ್ಮನಾಭ್ ಕೋಟ್ಯಾಂತರ ರೂ. ಲೂಟಿ ಹೊಡೆಯಲು ಶಿವಕುಮಾರ್ ಎಂಬ ವ್ಯಕ್ತಿಯನ್ನು ಸೃಷ್ಟಿಸಿ, ಆತನಿಗೆ ಜ್ಯೂನಿಯರ್ ಅಕೌಂಟೆಂಟ್ ಹುದ್ದೆಯನ್ನು ನೀಡಿದ್ದರು. ಈ ನಕಲಿ ವ್ಯಕ್ತಿಗೆ ಜ್ಯೂನಿಯರ್ ಅಕೌಂಟೆಂಟ್ ಎಂಬ ಐಡಿ ಕಾರ್ಡ್ ನೀಡಿ ಹಣಕಾಸು ವ್ಯವಹಾರ ನೋಡಿಕೊಳ್ಳುವ ಅಧಿಕಾರ ನೀಡಲಾಗಿತ್ತು.
ಹಣಕ್ಕೆ ಕನ್ನ ಹಾಕಲು ನಕಲಿ ವ್ಯಕ್ತಿಯ ಹೆಸರಿನಲ್ಲಿ ಫೆ. 21ರಂದು ಖಾತೆ ಓಪನ್ ಆಗುತ್ತದೆ. ಈ ಶಿವಕುಮಾರ್ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆಗೆ ಮನವಿ ಹೋಗುತ್ತದೆ. ಮನವಿ ಮೇರೆಗೆ ನಿಗಮದಿಂದ ಮಾ 5ರಿಂದ ಮೇ 6 ರವರೆಗೆ 187 ಕೋಟಿ ರೂ. ಹಣ ವರ್ಗಾವಣೆಯಾಗುತ್ತದೆ. ಶಿವಕುಮಾರ್ ಖಾತೆಯಿಂದ ಹೈದರಾಬಾದ್ನ ಬ್ಯಾಂಕ್ ಒಂದಕ್ಕೆ ಹಣ ವರ್ಗಾವಣೆಯಾಗುತ್ತದೆ.