ಬೆಂಗಳೂರು, ಜು. 15(DaijiworldNews/AA): ಕರ್ನಾಟಕದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಿದ್ದು, ಹಗರಣಗಳ ಅಸ್ತ್ರವನ್ನ ಹಿಡಿದು ವಿಪಕ್ಷಗಳು ಕದನಕ್ಕೆ ಸಜ್ಜಾಗಿದೆ.
ಒಟ್ಟು 9 ದಿನ ವಿಧಾನ ಮಂಡಲದ ಕಲಾಪ ನಡೆಯಲಿದ್ದು, ಈ ಬಾರಿ ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿರುವ ಹಗರಣಗಳು ಈ ಕಲಾಪದಲ್ಲಿ ಸದ್ದು ಮಾಡಲಿದೆ. ವಿಪಕ್ಷಗಳು ಈ ಹಗರಣಗಳನ್ನು ಮುಂದಿಟ್ಟುಕೊಮಡು ಕಲಾಪಕ್ಕೆ ಸಜ್ಜಾಗಿದ್ದರೆ ಪ್ರತ್ಯಸ್ತ್ರಗಳೊಂದಿಗೆ ರಾಜ್ಯ ಸರ್ಕಾರವೂ ಸಿದ್ಧವಾಗುತ್ತಿದೆ.
ಈ ಕಲಾಪದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂ. ಹಗರಣ, ಮುಡಾ ಹಗರಣ, ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್ಪಿ) ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು, ವರ್ಗಾವಣೆ ದಂಧೆಯ ಆರೋಪ, ಡೆಂಗಿ ನಿರ್ವಹಣೆಯಲ್ಲಿ ವೈಫಲ್ಯ, ರೈತರ ಆತ್ಮಹತ್ಯೆ, ರಾಜ್ಯ ಸರ್ಕಾರದ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ವಿಪಕ್ಷಗಳು ತಯಾರಿ ಮಾಡಿಕೊಂಡಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದಿದೆ. ಈವರೆಗೆ ನಡೆದ ನಾಲ್ಕು ಅಧಿವೇಶನಗಳನ್ನು ಹೋಲಿಸಿದರೆ ಈ ಬಾರಿಯ ಕಲಾಪವು 'ಕದನ ಕಣ'ದಂತಾಗುವ ಸಾಧ್ಯತೆ ಇದೆ. ವಿರೋಧ ಪಕ್ಷಗಳೆಲ್ಲ ಸೇರಿ ಸರ್ಕಾರದ ವಿರುದ್ಧ ಜಂಟಿ ಹೋರಾಟ ನಡೆಸಲು ಸಜ್ಜಾಗಿದೆ.