ಮುಂಬೈ , ಜು 16(DaijiworldNews/ AK):ವರ್ಲಿ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾಗೆ ಮುಂಬೈ ನ್ಯಾಯಾಲಯ ಜುಲೈ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಶಿವಸೇನಾ ರಾಜಕಾರಣಿ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ(24) . ಈತ ಮದ್ಯದ ಅಮಲಿನಲ್ಲಿ BMW ಅನ್ನು ಚಲಾಯಿಸಿದ್ದು, ಈ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ 45 ವರ್ಷದ ಕಾವೇರಿ ನಖ್ವಾ ಎಂಬ ಮಹಿಳೆ ಸಾವಿಗೀಡಾಗಿದ್ದರು. ವರ್ಲಿಯ ಆರ್ಟಿರಿಯಲ್ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಬೆಳಿಗ್ಗೆ 5:30 ಕ್ಕೆ ಬಿಎಂಡಬ್ಲ್ಯು ಸ್ಕೂಟರ್ಗೆ ಹಿಂಬದಿಯಿಂದ ಗುದ್ದಿದ್ದರಿಂದ ಮಹಿಳೆ ಸಾವಿಗೀಡಾಗಿದ್ದು, ಆಕೆಯ ಪತಿ ಪ್ರದೀಪ್ ನಖ್ವಾ ಗಾಯಗೊಂಡಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಮಿಹಿರ್ ಶಾ ಕಾರಲ್ಲಿ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ಕಡೆಗೆ ವೇಗವಾಗಿ ಹೋಗುತ್ತಿದ್ದನು ಎಂದು ಹೇಳಲಾಗುತ್ತದೆ. ಅಪಘಾತ ಸಂಭವಿಸಿ ಮಹಿಳೆ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು ನಂತರ 1.5 ಕಿಲೋಮೀಟರ್ ದೂರದವರೆಗೆ ಕಾರು ಆಕೆಯನ್ನು ಎಳೆದೊಯ್ದಿದೆ.
ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶಾ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮುಂಬೈ ಪೊಲೀಸ್ ತಂಡವು ಅಪಘಾತದ ದೃಶ್ಯವನ್ನು ಮರುಸೃಷ್ಟಿಸಿತ್ತು.
ಪ್ರಕರಣದಲ್ಲಿ ಮಿಹಿರ್ ಶಾ (24) ಅವರ ಕುಟುಂಬದ ಚಾಲಕ ರಾಜಋಷಿ ಬಿಡಾವತ್ ಕೂಡಾ ಆರೋಪಿಯಾಗಿದ್ದಾರೆ. ಅಪಘಾತದ ವೇಳೆ ಬಿಡಾವತ್ ಕಾರಿನಲ್ಲಿದ್ದರು. ಶಿವಸೇನಾ ರಾಜಕಾರಣಿ ರಾಜೇಶ್ ಶಾ ಅವರ ಸೂಚನೆ ಮೇರೆಗೆ ಚಾಲಕ ಮಿಹಿರ್ ಜೊತೆ ಚಾಲಕನ ಸೀಟನ್ನು ಬದಲಾಯಿಸಿಕೊಂಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.