ಬೆಂಗಳೂರು, ಜು. 20(DaijiworldNews/AA): ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು, ಅವರ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣಗಳಲ್ಲಿ ನಮ್ಮ ಶಾಸಕರ ಪಾತ್ರವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ವಾಲ್ಮೀಕಿ ಹಾಗೂ ಮೂಡಾ ಹಗರಣದ ಕುರಿತು ಮಾತನಾಡಿದ ಅವರು, ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ. ನನ್ನ ಬಳಿ ಆಣೆ ಪ್ರಮಾಣ ಮಾಡಿ ಹೇಳಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡೋದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಹಗರಣ ಆಗಿದೆ ಅಂತ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇನ್ನು ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗಳಿರಬೇಕು. ಸ್ವಂತ ಕಟ್ಟಡಗಳಿರುವಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾದ ನೆರವು ಪಕ್ಷವೇ ಭರಿಸಲಿದೆ. ಬ್ಲಾಕ್ ಮಟ್ಟದಲ್ಲೂ ಕಚೇರಿಗಳಿರಬೇಕು. ಬಾಡಿಗೆ ಕಟ್ಟಡಗಳಲ್ಲಾದ್ರೂ ಕಚೇರಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.