ಬೆಂಗಳೂರು, ಜು.21(DaijiworldNews/AK):ರಾಜ್ಯ ಸರಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳು, ಉಳುವರೆ ಗ್ರಾಮದ ದುರ್ಘಟನೆ ಸಂಬಂಧ ತಕ್ಷಣ ಪರಿಹಾರ ಕೊಡಬೇಕು. ಭಯಭೀತ ಜನರಿಗೆ ಶಾಶ್ವತ ಸೂರು ಕಲ್ಪಿಸಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಬಳಿಯ ಗುಡ್ಡ ಕುಸಿದು ಹಲವರು ಸಾವನ್ನಪ್ಪಿದ ಉಳುವೆರೆ ಗ್ರಾಮಕ್ಕೆ ಅವರು ಭೇಟಿ ಕೊಟ್ಟರು. ಗುಡ್ಡ ಕುಸಿತ, ನೆರೆಹಾವಳಿಯಿಂದ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿ, ರಾಜ್ಯ ಸರಕಾರವು ತಕ್ಷಣ ಕಾರ್ಯಾಚರಣೆಗೆ ಇಳಿಯಬೇಕಿತ್ತು. ರಾಜ್ಯ ಸರಕಾರದ ಕಡೆಯಿಂದ ತಡವಾಗಿದೆ. ಪ್ರಾಣಹಾನಿ ಸಂಭವಿಸಿದ್ದು, ಎಲ್ಲ ಮೃತದೇಹಗಳು ಸಿಕ್ಕಿಲ್ಲ. ಮನೆಗಳು ಕುಸಿದು ಹೋಗಿವೆ ಎಂದು ನೋವಿನಿಂದ ಹೇಳಿದರು.
ಇನ್ನು ಒಂದು ದಿನವೂ ತಡ ಮಾಡದಿರಿ; ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ಶಾಶ್ವತವಾಗಿ ಮನೆ ಕಟ್ಟಿಸಿ ಕೊಡಿ; ಪರಿಹಾರವನ್ನೂ ವಿತರಿಸಿ ಎಂದು ಅವರು ಇದೇವೇಳೆ ಒತ್ತಾಯಿಸಿದರು.ನಮ್ಮ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ಮಾತನಾಡಿದ್ದೇನೆ. ಅವರು ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ. ಪ್ರಧಾನಮಂತ್ರಿಯವರ ಕಚೇರಿಯಿಂದ ಮಾಹಿತಿ ಪಡೆದಿದ್ದಾರೆ. ಮಿಲಿಟರಿ ಪಡೆಯೂ ಇಲ್ಲಿಗೆ ಬರುತ್ತಿದೆ. ಎನ್ಡಿಆರ್ಎಫ್, ಮಿಲಿಟರಿ ಫೋರ್ಸ್ ಕಾರ್ಯಾಚರಣೆ ನಡೆಯಲಿದೆ. ತಕ್ಷಣವೇ ಬದಲಿ ನಿವೇಶನ ಕೊಟ್ಟು ಸೂರು ಕಟ್ಟಿಸಿಕೊಡಿ ಎಂದು ತಿಳಿಸಿದರು.
ಯಾವ ರೀತಿಯಲ್ಲಿ ಕೇಂದ್ರ ಸರಕಾರವು ಶ್ರಮ ಹಾಕಬೇಕೋ ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಸಿಎಂ ಧಾವಿಸಿ ಬಂದು ಸೂಚನೆಗಳನ್ನು ಕೊಡಬೇಕಿತ್ತು:
ದುರ್ಘಟನೆ ನಡೆದು ಒಂದು ವಾರ ಆಗಿದ್ದರೂ ಮುಖ್ಯಮಂತ್ರಿಗಳು ಬಾರದೆ ವಿಳಂಬ ಮಾಡಿದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಏನೇ ಅಧಿವೇಶನ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ತಕ್ಷಣ ಇಲ್ಲಿಗೆ ಧಾವಿಸಬೇಕಿತ್ತು. ಜಿಲ್ಲಾಧಿಕಾರಿ, ಇತರ ಅಧಿಕಾರಿಗಳಿಗೆ ಸೂಚನೆ ಕೊಡುವ ಕೆಲಸ ಮಾಡಬೇಕಿತ್ತು. ಸಿಎಂ ಭೇಟಿ ತಡವಾಗಿದೆ. ಮುಖ್ಯಮಂತ್ರಿಗಳನ್ನು ನೀವು ಕೂಡ ಪ್ರಶ್ನೆ ಮಾಡಿ ಎಂದು ತಿಳಿಸಿದರು.
ಮೃತದೇಹಗಳನ್ನು ಇನ್ನೂ ಹುಡುಕುತ್ತಿದ್ದಾರೆ ಎಂದ ಅವರು, ಕಳಪೆ ಕಾಮಗಾರಿ ಕುರಿತು ಚರ್ಚಿಸಲು ಸಮಯ ಇದೆ. ಈಗ ಬಡವರ ಸಮಸ್ಯೆಗೆ ಸ್ಪಂದಿಸುವುದು ಆದ್ಯ ಕರ್ತವ್ಯ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಸಂಸದರು ಘಟನೆ ಕುರಿತು ಕೇಂದ್ರದ ಜೊತೆ ಚರ್ಚೆ ಮಾಡಲಿದ್ದಾರೆ ಎಂದೂ ತಿಳಿಸಿದರು.
ಇಲ್ಲಿನ ಸಮಸ್ಯೆ, ಆರೋಪಗಳ ಕುರಿತು ಕೇಂದ್ರದ ಗಮನಕ್ಕೆ ತರಲಿದ್ದೇವೆ. ಇದು ಆರೋಪ- ಪ್ರತ್ಯಾರೋಪ ಮಾಡಲು ಸೂಕ್ತ ಸಮಯ ಅಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಬಡವರು ಮನೆ ಕಳಕೊಂಡ ವಿಚಾರಕ್ಕೆ ತಕ್ಷಣ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.ಉಳುವರೆಯಲ್ಲಿ ನಮ್ಮೆಲ್ಲ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಭೇಟಿ ಕೊಟ್ಟಿದ್ದೇನೆ. ಇಲ್ಲಿ ನಡೆದ ದುರ್ಘಟನೆ ಅತ್ಯಂತ ಬೇಸರ ತರುವ ವಿಚಾರ. ಬಡವರು ಮನೆ ಕಳಕೊಂಡಿದ್ದಾರೆ; ಪ್ರಾಣ ಹಾನಿಯೂ ಸಂಭವಿಸಿದೆ. ಜನರು ಕಣ್ಣೀರು ಹಾಕುತ್ತಿದ್ದಾರೆ ಎಂದು ನುಡಿದರು.
ನನ್ನ ಅತ್ತಿಗೆ ಮೃತದೇಹ ಹುಡುಕಿಸಿ ಕೊಡಿ ಆಳಲು
ನನ್ನ ಅತ್ತಿಗೆ ಮೃತದೇಹ ಸಿಕ್ಕಿಲ್ಲ. ಏನಾದರೂ ಮಾಡಿ; ಊಟ ಮಾಡದೆ ನಾಲ್ಕು ದಿನಗಳಾಗಿವೆ. ದಯವಿಟ್ಟು ನೆರವಾಗಿ ಎಂದು ಸಂತ್ರಸ್ತ ಮಹಿಳೆಯೊಬ್ಬರು ವಿಜಯೇಂದ್ರರಿಗೆ ಮನವಿ ಮಾಡಿದರು.
ನನಗೆ ಯಾರೂ ಇಲ್ಲ. ದಯವಿಟ್ಟು ಬಾಡಿ (ಮೃತದೇಹ) ಹುಡುಕಿಸಿಕೊಡಿ ಎಂದು ಅಳುತ್ತಲೇ ವಿನಂತಿಸಿದರು. ಮನೆ ಮಠ ಏನೂ ಇಲ್ಲ ಎಂದರು. ದುರ್ಘಟನೆ ನಡೆದಿದೆ. ದಯವಿಟ್ಟು ಸಮಾಧಾನ ಮಾಡಿಕೊಳ್ಳಿ. ಪರಿಹಾರ, ಸೂರಿನ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯುವುದಾಗಿ ವಿಜಯೇಂದ್ರ ಅವರು ತಿಳಿಸಿದರು.