ನವದೆಹಲಿ, ಜು 25 (DaijiworldNews/MS): ಕೇಂದ್ರ ಬಜೆಟ್ ಜುಲೈ 23ಕ್ಕೆ ಮಂಡನೆ ಆಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಂತರ ಪರ-ವಿರೋಧಗಳು ವ್ಯಕ್ತವಾಗಿತ್ತು, ಬುಧವಾರ ರಾಜ್ಯಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆದಿದೆ. ಈ ವೇಳೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ " ಮಂಡಿಸಿದ ಬಜೆಟ್ನಲ್ಲಿ ಎರಡು ರಾಜ್ಯಗಳನ್ನು ಬಿಟ್ಟರೆ ಯಾವುದೇ ರಾಜ್ಯಕ್ಕೆ ತಟ್ಟೆಯಲ್ಲಿ ಪಕೋಡಾ ಮತ್ತು ಜಿಲೇಬಿ ಬಡಿಸಲಾಗಿದೆ" ಎಂದು ಕೇಂದ್ರ ಬಜೆಟ್ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಹಂಚಿಕೆಗಳನ್ನು ಉಲ್ಲೇಖಿಸಿದ ಖರ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾತಾಜಿ ಎಂದು ಕರೆದಿದ್ದಾರೆ.
ಈ ವೇಳೆ ಮಧ್ಯೆಪ್ರವೇಶಿಸಿದ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಖರ್ಗೆ ಜೀ ಅವರು ನಿಮಗೆ ಮಾತಾಜಿ ಅಲ್ಲ(ತಾಯಿ), ಮಗಳು ಸಮಾನ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ ಮಾತನ್ನು ಸಭಾಪತಿ ಜಗದೀಪ್ ಧನಕರ್ ತಿದ್ದಿದ್ದರಿಂದ ಕೇಂದ್ರ ಬಜೆಟ್ ಮೇಲಿನ ಬಿಸಿ ಬಿಸಿ ಚರ್ಚೆಯ ನಡುವೆ ರಾಜ್ಯಸಭೆ ಕೆಲವು ಕಾಲ ನಗೆಗಡಲಲ್ಲಿ ತೇಲಡಿತು.
ಖರ್ಗೆ ಅವರೇ ನಿಮ್ಮ ಮಾತಿಗೆ ಪ್ರತಿಕ್ರಿಯೆ ನೀಡಲಿ ಸಚಿವರಿಗೆ ಅವಕಾಶ ನೀಡಿ ಎಂದು ಸಭಾಪತಿ ಧನಕರ್ ಅವರು ಹೇಳಿದಾಗ, ಹೌದು ಮಾತಾಜಿಗೆ ಮಾತನಾಡಲು ಅವಕಾಶ ನೀಡುವೇ, ಮಾತಾಜಿ ಮಾತನಾಡುವುದರಲ್ಲಿ ನಿಪುಣರು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಧನಕರ್ ಖರ್ಗೆ ಅವರೇ ನಿರ್ಮಲಾ ನಿಮಗೆ ಮಾತಾಜಿ ಅಲ್ಲ, ಮಗಳು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಬಜೆಟ್ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.