ಬೆಂಗಳೂರು, ಜು 25 (DaijiworldNews/ AK): ವಿಧಾನಸಭೆಯಲ್ಲೇ ಮಲಗಿ, ಅಹೋರಾತ್ರಿ ಧರಣಿ ಮಾಡಿದ್ದ ಬಿಜೆಪಿ-ಜೆಡಿಎಸ್ ನಾಯಕರು, ಇವತ್ತು ಕಲಾಪ ಆರಂಭವಾಗ್ತಿದ್ದಂತೆ ಮತ್ತೆ ಮೂಡಾ ಹಗರಣ ವಿಚಾರ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸದನದಲ್ಲಿ ನಿರಂತರವಾಗಿ ಗಲಾಟೆ ಗದ್ದಲ ಮುಂದುವರೆದಿತ್ತು.
ಈ ಗಲಾಟೆ ಮಧ್ಯೆ ಕೆಲವು ವಿಧೇಯಕ ಅಂಗೀಕಾರ ಮಾಡಲಾಗಿದೆ. ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಸಿಇಟಿ ಅಂಕಗಳನ್ನು ಆಧರಿಸಿ ಪ್ರವೇಶಾತಿ ನೀಡಬೇಕೆಂದು ಒತ್ತಾಯಿಸಲಾಗಿದೆ.
ವಿಧಾನಪರಿಷತ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು, ನೀಟ್ ರದ್ದತಿಗೆ ಕೋರಿ ನಿರ್ಣಯ ಮಂಡಿಸಿದರು. ಸಿಇಟಿ ಅಂಕಗಳನ್ನು ಆಧರಿಸಿ ಪ್ರವೇಶಾತಿ ನೀಡಬೇಕು. ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು.
ಇದೇ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸಿ ವಿಧಾನಪರಿಷತ್ನಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಣಯ ಮಂಡಿಸಿದರು. ಬಿಜೆಪಿ, ಜೆಡಿಎಸ್ ಸದಸ್ಯ ಬಲ ಹೆಚ್ಚಿದ್ದರೂ ಗದ್ದಲದಿಂದ ನಿರ್ಣಯ ಪಾಸ್ ಮಾಡಲಾಗಿದೆ. ಒಂದು ರಾಷ್ಟ್ರ ಒಂದು ಚುನಾವಣೆ ನೀತಿಯನ್ನು ಅನುಷ್ಠಾನಗೊಳಿಸಬಾರದು. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ 2006(2007ರ ಕೇಂದ್ರ ಅಧಿನಿಯಮ 02) ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತ ಮತ್ತು ಸಮರ್ಪಕವಾಗಿ ಮಾರ್ಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು. ಇದರ ಜೊತೆಗೆಹೊಸ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ನಡೆಸಬಾರದು ಮತ್ತು ಜನಸಂಖ್ಯೆ ಆಧರಿಸಿ ಸ್ಥಾನಗಳ ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಮತ್ತು ವಿಧಾನಸಭೆ ಸ್ಥಾನಗಳನ್ನು 1971ರ ಜನಗಣತಿ ಆಧರಿಸಿ ನಿರ್ಧರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು.