ನವದೆಹಲಿ,ಜು 26 (DaijiworldNews/MS): ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ಹಾರಾಟ ರದ್ದು ಪ್ರಕರಣಗಳು ಹೆಚ್ಚಾಗದಂತೆ ಕ್ರಮ ವಹಿಸಲಾಗುವುದು ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಲೋಕಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು, ಕಳೆದ ಏಪ್ರಿಲ್ ನಿಂದ ಜೂನ್ ವರೆಗೆ 164 ವಿಮಾನಗಳ ಹಾರಾಟ ರದ್ದಾಗಿದೆ. ಮೇ ತಿಂಗಳಲ್ಲಿ ಏರ್ ಇಂಡಿಯಾ ಏಕ್ಸ್ ಪ್ರೆಸ್ ಸಿಬ್ಬಂದಿಯ ಮುಷ್ಕರದಿಂದ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮಾರ್ಗಸೂಚಿಗಳನ್ನು ಪಾಲಿಸದ ವಾಯುಯಾನ ಸಂಸ್ಥೆಗಳಿಗೆ ದಂಡ ವಿಧಿಸಲಾಗುತ್ತಿದೆ. ಸದ್ಯ ವಿಮಾನಗಳ ಹಾರಾಟ ವಿಳಂಬ ಮತ್ತು ಹಾರಾಟ ರದ್ದು ಆಗುತ್ತಿಲ್ಲ ಎಂದರು. ಆಂಧ್ರಪ್ರದೇಶ ರಾಜಧಾನಿ ವಿಜಯವಾಡದಲ್ಲಿ 2020ರಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಮುಂದಿನ ವರ್ಷದ ಜೂನ್ ಒಳಗೆ ಇಡೀ ಕಾಮಗಾರಿ ಪೂರ್ಣಗೊಳ್ಳಲಿದೆ. ಕೊಲ್ಕತಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಜಮೀನು ದೊರೆತರೆ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
2030ರ ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣ ಶೇಕಡ 45ಕ್ಕೆ ಇಳಿಸುವ ಗುರಿಯೊಂದಿಗೆ ಭಾರತ ಸಾಗುತ್ತಿದೆ ಎಂದು ಇಂಧನ ಸಚಿವ ಮನೋಹರ್ ಲಾಲ್ ಸದನಕ್ಕೆ ತಿಳಿಸಿದರು. 2004ರಲ್ಲಿ ಭಾರತದಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಶೇಕಡ 33ರಿಂದ 35ರಷ್ಟಿತ್ತು. ಹೊರಸೂಸುವಿಕೆ ಇಳಿಕೆಯಲ್ಲಿ ಜಾಗತಿಕ ಬದ್ಧತೆಗಳನ್ನು ಭಾರತ ಪಾಲಿಸುತ್ತಿದೆ ಎಂದರು. ಇಡೀ ವಿಶ್ವದಲ್ಲೇ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.