ಹೈದರಾಬಾದ್, ಜು.27(DaijiworldNews/AA): ಬಡತನದ ವಿರುದ್ಧ ಮೋದಿ ಸರ್ಕಾರ ಪ್ರಬಲವಾಗಿ ಹೋರಾಡುತ್ತಿದೆ. ದೇಶದ ಆರ್ಥಿಕತೆ ವೇಗದ ಗತಿಯಲ್ಲಿ ಸಾಗುತ್ತಿದೆ. ಹಣದುಬ್ಬರ ನಿಯಂತ್ರಿಸಲು ಸರ್ಕಾರದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವಕರು, ರೈತರು, ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ನಿರುದ್ಯೋಗ ನಿವಾರಣೆಗೆ, ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ಎಲ್ಲಾ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಕೇಂದ್ರ ಬಜೆಟ್ನಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುತ್ತದೆ. ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ದೇಶದ 20 ಕಡೆ ರೈಲ್ವೆ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದೆ. ತೆಲಂಗಾಣದಲ್ಲೂ ರಸ್ತೆ ಸೇರಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಜಿಎಸ್ಟಿ ಪರಿಹಾರ ಸೇರಿ ಹಲವು ಅನುದಾನಗಳನ್ನು ರಾಜ್ಯಗಳಿಗೆ ನೀಡಲಾಗಿದೆ ಎಂದರು.
ನವೀಕರಿಸಬಹುದಾದ ಇಂಧನಗಳಿಗೂ ಅನುದಾನ ನೀಡಲಾಗಿದ್ದು, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರಧಾನ ಮಂತ್ರಿ ಕಲ್ಯಾಣ ಅನ್ನ ಯೋಜನೆ ಮುಂದಿನ ಐದು ವರ್ಷದವರೆಗೆ ವಿಸ್ತರಿಸಲಾಗಿದೆ. 80 ಕೋಟಿ ಫಲಾನುಭವಿಗಳು ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಬುಡಕಟ್ಟು ಜನಾಂಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಭಾರತ ಉತ್ಪಾದನೆಯಲ್ಲಿ ವೇಗ ಪಡೆದುಕೊಂಡಿದೆ. 12 ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.