ಮೈಸೂರು, ಜು.28(DaijiworldNews/AA): ಕೇಂದ್ರದ ವಿರುದ್ಧ ಸುಮ್ಮನೇ ಆರೋಪ ಮಾಡ್ತಾ ತಿರುಗಾಡುತ್ತಿದ್ದೀರಿ. ಮೊದಲು ನಿಮ್ಮ ಸಣ್ಣತನ ಬಿಟ್ಟುಬಿಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನ ಕೊಡುಗೆ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ನಡವಳಿಕೆ ಬದಲಾವಣೆ ಮಾಡಿಕೊಳ್ಳಲಿ. ನೀವು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೇಕೆದಾಟು ಯೋಜನೆಗಾಗಿ ನಾನು ಪ್ರಯತ್ನ ಮಾಡುತ್ತೇನೆ. ಒಂದೇ ರಾತ್ರಿಯಲ್ಲಿ ಮೇಕೆದಾಟು ಯೋಜನೆ ಮಾಡೋಕೆ ಆಗುತ್ತಾ? ಕರ್ನಾಟಕದ ನಾಲ್ಕು ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ. ಕರ್ನಾಟಕದವರೇ ಕಟ್ಟಿರುವುದು. ಕಾವೇರಿ ನೀರು ಬಿಡುವ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜತೆ ಚರ್ಚೆ ಮಾಡಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.
ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಹಣ ಘೋಷಿಸಿದೆ. ಅನುದಾನ ಕೊಟ್ಟಿಲ್ಲ ಅಂತ ಕಾಂಗ್ರೆಸ್?ನವರು ಆರೋಪಿಸುತ್ತಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗುತ್ತಿಲ್ಲ. ರಾಜ್ಯವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಕೇವಲ ಬೈದಾಡಿಕೊಂಡು ತಿರುಗಾಡುವುದರಿಂದ ಪ್ರಯೋಜನವಾಗಲ್ಲ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತೆ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡದೆ, ಕೇಂದ್ರದ ವಿರುದ್ಧ ವಿನಾಕಾರಣ ಆರೋಪ ಮಾಡೋದು ಸರಿಯಲ್ಲ ಎಂದರು.