ಬೆಳಗಾವಿ, ಜು.28(DaijiworldNews/AA): ವಾಲ್ಮೀಕಿ ಸಮುದಾಯಕ್ಕೆ ರಾಜ್ಯ ಸರ್ಕಾರ ಮೋಸ ಮಾಡಿದೆ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದರೇ ನಾನು, ಬಸನಗೌಡ ಪಾಟೀಲ್ ಯತ್ನಾಳ್ ಪಾದಯಾತ್ರೆ ಮಾಡಲು ಸಿದ್ಧರಿದ್ದೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕಿಂತ ವಾಲ್ಮೀಕಿ ನಿಗಮದ ಹಗರಣ ದೊಡ್ಡದು. ವಾಲ್ಮೀಕಿ ನಿಗಮದ ಹಗರಣ, ಎಸ್ಸಿಎಸ್ಪಿ, ಟಿಎಸ್ ಪಿ ಹಣವನ್ನು ಗ್ಯಾರಂಟಿಗೆ ಬಳಸಿದ್ದಾರೆ. ಇದನ್ನು ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ಸಿದ್ಧರಿದ್ದೇವೆ. ಪಾದಯಾತ್ರೆ ಬಗ್ಗೆ ಹೈಕಮಾಂಡ್ನಿಂದ ಅನುಮತಿ ಕೇಳಿದ್ದೇವೆ ಎಂದರು.
ಸದನದಲ್ಲಿ ಗಲಾಟೆ ಮಾಡಿದರೆ ಸಾಲಲ್ಲ, ಪಾದಯಾತ್ರೆ ಮಾಡಬೇಕು. ಬಳ್ಳಾರಿ ಪಾದಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಪಾದಯಾತ್ರೆ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಜೊತೆ ಮಾತನಾಡಲ್ಲ. ನಾನೇನಿದ್ದರೂ ಹೈಕಮಾಂಡ್ ಜೊತೆಗೆ ಮಾತನಾಡ್ತೇನೆ. ಪಾದಯಾತ್ರೆಗೆ ವಿಜಯೇಂದ್ರ ಒಪ್ಪಿಲ್ಲ, ಒಪ್ಪುವುದೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ತಪ್ಪಿಗಿಂತ, ಬಿಜೆಪಿ ಪಕ್ಷದ ತಪ್ಪಿನಿಂದ ನಾವು ಅಧಿಕಾರಕ್ಕೆ ಬರಲಿಲ್ಲ. ಬಿಜೆಪಿ ಸಮಸ್ಯೆಯಿಂದ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.