ಬೆಂಗಳೂರು, ಜು.28(DaijiworldNews/AK): ರಾಜ್ಯದ ಕಾಂಗ್ರೆಸ್ ಸರಕಾರವು ಶತಮಾನದ ದೊಡ್ಡ ಭ್ರಷ್ಟಾಚಾರ ಹಗರಣದಲ್ಲಿ ಪಾಲ್ಗೊಂಡಿದೆ. ಈ ಸಂಬಂಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ರಾಜ್ಯದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳ ವಿರುದ್ಧ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸದನದ ಒಳಗೆ ಮತ್ತು ಹೊರಗೆ ಗಟ್ಟಿಯಾಗಿ ಹೋರಾಟ ರೂಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಆದ ಹಣದ ಅವ್ಯವಹಾರದ ಸಂಬಂಧ ಎಲ್ಲ ಶಾಸಕರು ಸೇರಿ ಗಟ್ಟಿ ಧ್ವನಿಯಿಂದ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಯನ್ನು ಎದುರಿಸುವ ಕೆಲಸ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು.ಇವತ್ತು ನಡೆದ ಸಭೆಯಲ್ಲಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಜೆಡಿಎಸ್ ಮುಖಂಡ ಮತ್ತು ಕೇಂದ್ರದ ಸಚಿವ ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ, ಪಕ್ಷದ ಹಿರಿಯರಾದ ಯಡಿಯೂರಪ್ಪ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಭಾಗವಹಿಸಿದ್ದರು ಎಂದರು.
ಶೀಘ್ರವೇ ಬೆಂಗಳೂರು- ಮೈಸೂರು ನಡುವೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿಯಿಂದ, ಕಲ್ಯಾಣ ಕರ್ನಾಟಕ ಭಾಗದಿಂದ ಹೋರಾಟ ನಡೆಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.