ಬೆಂಗಳೂರು, ಜು.28(DaijiworldNews/AK): ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಜೆಡಿಎಸ್, ಬಿಜೆಪಿ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವಾಗ ದಿಢೀರ್ ಆಗಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ ಸ್ರಾವ ಆಗಿದೆ. ರಕ್ತ ಸೋರುವುದನ್ನು ನೋಡಿ ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಗಾಬರಿಯಾಗಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಸರು ಕೇಳಿಬಂದಿದ್ದರಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಇಂದು (ಜುಲೈ 28) ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆ ಮಾಡಿ ಚರ್ಚೆ ಮಾಡಿದ್ದಾರೆ.
ಬಳಿಕ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ ಸೋರಿದೆ. ಸುದ್ದಿಗೋಷ್ಠಿ ವೇಳೆಯಲ್ಲೇ ದಿಢೀರ್ ಮೂಗಿನಲ್ಲಿ ರಕ್ತಸ್ರಾವವಾಗಿದೆ. ಇದರಿಂದ ಕೆಲ ಕಾಲ ಆತಂಕ ಸೃಷ್ಟಿಸಿದ್ದು, ಕೂಡಲೇ ಕುಮಾರಸ್ವಾಮಿ ಅವರನ್ನು ಪುತ್ರ ನಿಖಿಲ್ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ಬಟ್ಟೆಯಿಂದ ಮೂಗನ್ನು ಎಚ್ಡಿಕೆ ಪದೇ ಪದೇ ಒರೆಸಿಕೊಂಡರು. ಅದರೂ ರಕ್ತ ಸೋರುವಿಕೆ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾಗಿದ್ದು, ಬಿಳಿ ಶರ್ಟ್ ರಕ್ತಮಯವಾಗಿದೆ. ತಕ್ಷಣ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು.