ಬೆಂಗಳೂರು, ಜು.28(DaijiworldNews/AK): ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚಿಕಿತ್ಸೆ ಬಳಿಕ ಮಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನನ್ನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲ. ಭಗವಂತನ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.
ಮೂರು ಬಾರಿ ಹೃದಯದ ವಾಲ್ ಬದಲಾವಣೆ ಆಗಿದೆ. ಇದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಒತ್ತಡ, ವಿಶ್ರಾಂತಿ ಪಡೆಯದೆ ಕೆಲಸ ಮಾಡಿದ್ದರಿಂದ ಈ ರೀತಿ ಆಗಿದೆ. ರಾಜ್ಯದ ಜನರಿಗೆ ಕೆಲಸ ಮಾಡಿಕೊಡಬೇಕು ಅಂತ ಓಡಾಡುತ್ತಿದ್ದೆ. ಒತ್ತಡವನ್ನ ಕಡಿಮೆ ಮಾಡಿಕೊಳ್ಳಿ ಅಂತ ವೈದ್ಯರ ಹೇಳಿದ್ದಾರೆ ಎಂದರು.
ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಚಿಕಿತ್ಸೆ ಪಡೆಯುತ್ತಿರುವ ಕುಮಾರಸ್ವಾಮಿ ಅವರು ಶೀಘ್ರ ಚೇತರಿಸಿಕೊಂಡು ಮತ್ತೆ ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಕುಮಾರಸ್ವಾಮಿ ಭೇಟಿ ಬಳಿಕ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಆರಾಮಾಗಿದ್ದಾರೆ. ಕೆಲಸದ ಒತ್ತಡವಿತ್ತು. ಹಾಗಾಗಿ ಅವರಿಗೆ ಸ್ವಲ್ಪ ಆಯಾಸವಾಗಿದೆ. ಯಾರು ಗಾಬರಿ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.